ಅತಿವೃಷ್ಟಿ ನೆರವು ನಿಗದಿತ ಉದ್ದೇಶಕ್ಕೇ ಬಳಸಿಕೊಳ್ಳಿ, ಇಲ್ಲವಾದಲ್ಲಿ ಹಣ ವಸೂಲಿಗೆ ಕ್ರಮ

web 4
Published on

ಚಿಕ್ಕಮಗಳೂರು: ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡು ಸರ್ಕಾರದ ಆರ್ಥಿಕ ನೆರವು ಪಡೆದವರು ನಿರ್ದಿಷ್ಟ ಉದ್ದೇಶಕ್ಕೆ ಹಣ ವಿನಿಯೋಗಿಸದಿದ್ದಲ್ಲಿ ಅವರ ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ಆ ಹಣ ವಸೂಲಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಎಚ್ಚರಿಸಿದ್ದಾರೆ.

ಮಳೆ ಅನಾಹುತದಲ್ಲಿ ಮನೆ ಕಳೆದುಕೊಂಡ ಕುಟುಂಬಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ್ದು, ಮನೆಗಳ ಹಾನಿ ಆಧರಿಸಿ ಸಂಪೂರ್ಣ ಮನೆ ಹಾನಿಯಾದವರಿಗೆ 5 ಲಕ್ಷ, ಶೇ.70ರಷ್ಟು ಹಾನಿಯಾದವರಿಗೆ 3 ಲಕ್ಷ ಹಾಗೂ ಭಾಗಶಃ ಹಾನಿಯಾದವರಿಗೆ ಒಂದು ಲಕ್ಷ ರೂ. ಸರ್ಕಾರ ನೀಡಲಿದೆ ಎಂದು ವಿಜಯವಾಣಿಗೆ ಸೋಮವಾರ ಮಾಹಿತಿ ನೀಡಿದರು.

ಈಗಾಗಲೆ ಎ.ವರ್ಗದ 451 ಕುಟುಂಬಗಳು, ಬಿ.ವರ್ಗದ 516 ಕುಟುಂಬಗಳು ಹಾಗೂ ಸಿ.ವರ್ಗದ 967 ಕುಟುಂಬಗಳಿಗೆ ಸಂಬಂಧಿಸಿದ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಇನ್ನೊಂದು ತಿಂಗಳಲ್ಲಿ ಈ ಕುಟುಂಬಗಳು ಹಣ ಪಡೆದ ಉದ್ದೇಶಕ್ಕೆ ತಕ್ಕಂತೆ ಮನೆ ನಿರ್ವಣ, ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದರು.

ಈಗಾಗಲೆ ಕೆಲವರು ಮನೆ ನಿರ್ವಣಕ್ಕೆ ಮುಂದಾಗಿದ್ದರೆ ಇನ್ನು ಕೆಲವರು ಸಂಕ್ರಾಂತಿ ಬಳಿಕ ನಿರ್ವಿುಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಮತ್ತೆ ಕೆಲವರು ಹಣ ಪಡೆದು ಮನೆ ನಿರ್ಮಾಣ ಇಲ್ಲವೆ ದುರಸ್ತಿಗೆ ಮುಂದಾಗಿರುವುದು ಕಂಡುಬಂದಿಲ್ಲ. ಏನೇ ಆದರೂ ಹಣವನ್ನು ನಿಗದಿತ ಉದ್ದೇಶಕ್ಕೆ ವಿನಿಯೋಗಿಸಬೇಕು. ಹಾಗೊಂದು ವೇಳೆ ಹಣ ಪಡೆದು ವಿನಿಯೋಗಿಸದಿದ್ದಲ್ಲಿ ಅಂತಹ ಪ್ರಕರಣದ ಹಣವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಿಗೆ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net