ಸಾರ್ಥಕ ಬದುಕು ನಡೆಸಿದ ಡಾ.ಬಾಬೂಜಿ

5-KGL-1
ಪಟ್ಟಣದ ಗುರುಭವನದಲ್ಲಿ ಶನಿವಾರ ತಾಲೂಕು ಆಡ ಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 118ನೇ ಜಯಂತಿ ಕಾರ್ಯಕ್ರಮದಲ್ಲಿ 2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು. ರೇಖಾ ರಮೇಶ್, ಎ.ಪಿ.ಶಂಕರ್, ಸುರೇಶ್, ಬಿ.ಆರ್. ಮಹೇಶ್, ಬಸವ ರಾಜು, ದೊರೆಸ್ವಾಮಿ ಇದ್ದಾರೆ.
Published on

ಕೊಳ್ಳೇಗಾಲ: ಡಾ.ಬಾಬು ಜಗಜೀವನರಾಮ್ ಅವರು ಸಾರ್ಥಕ ಬದುಕನ್ನು ನಡೆಸಿದವರು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 118ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸ್ವಾಭಿಮಾನದಿಂದ ಬದುಕನ್ನು ಕಟ್ಟಿಕೊಳ್ಳುವುದನ್ನು ಹೇಳಿಕೊಟ್ಟಿದ್ದಾರೆ. ರೈತರ ಕುಟುಂಬದಿಂದ ಬಂದ ಬಾಬು ಜಗಜೀವನರಾಮ್ ದೇಶದ ಬಡವರ ಅಭಿವೃದ್ಧಿಗೆ ಜೀವನ ಪೂರ್ತಿ ಹೋರಾಟ ಮಾಡಿದ್ದಾರೆ ಎಂದರು.

ಅಂಬೇಡ್ಕರ್ ಅವರು ನೀಡಿದ ಮೀಸಲಾತಿ ಸರ್ವರಿಗೂ ತಲುಪುತ್ತಿದೆ. ದೇಶದಾದ್ಯಂತ ಪ್ರಗತಿಪರರು ನಮ್ಮ ಸಮುದಾಯದ ಮೀಸಲಾತಿ ಹಾಗೂ ಸಂವಿಧಾನಿಕ ಹಕ್ಕನ್ನು ಗಟ್ಟಿಗೊಳಿಸಲು ನಿಲ್ಲಬೇಕು ಎಂದರು.

ಮುಖ್ಯ ಭಾಷಣಕಾರ ಶಿಕ್ಷಕ ದೊರೆಸ್ವಾಮಿ ಮಾತನಾಡಿ, ಬಾಬು ಜಗಜೀವನರಾಮ್ ಅವರು ಆದರ್ಶಪ್ರಾಯರಾಗಿದ್ದರು. ಪ್ರಾಥಮಿಕ ಶಾಲೆ ಹಂತದಲ್ಲಿಯೇ ಅಸ್ಪೃಶ್ಯತೆ ವಿರುದ್ಧ ಹೋರಾಡಿದವರು. ದಕ್ಷ ರಾಜಕಾರಣಿ ಆಗಿ ಸಾಮಾಜಿಕವಾಗಿ ಹಿಂದುಳಿದವರನ್ನು ಸದೃಢಗೊಳಿಸಲು ಜೀವನವಿಡಿ ಹೋರಾಟ ಮಾಡಿದರು.

ಎಲ್ಲ ಸಮುದಾಯದ ದುರ್ಬಲರ ಪರವಾಗಿ, ರೈತರ ಹಾಗೂ ಕಾರ್ಮಿಕರ ಪರವಾಗಿ ನಿಂತರು.ಇಂತಹ ಮಹನೀಯರ ಸ್ಮರಣೆ ಭಾಷಣ, ಮೆರವಣಿಗೆಗೆ ಸೀಮಿತ ವಾಗಬಾರದು. ಅವರ ಹಾದಿಯಲ್ಲಿ ನಡೆಯಬೇಕು. ಸಮಾಜದ ಅನಿಷ್ಟ ಪದ್ಧತಿ ವಿರುದ್ಧ ಸಿಡಿದೇಳಬೇಕಿದೆ. ನಮ್ಮ ಸಮುದಾಯ ಹೇಳಿಗೆಗೆ ಏನಾದರೂ ಕೊಡುಗೆ ನೀಡಬೇಕು ಎಂದರು.

ಮೀಸಲಾತಿ ಜಾತೀಯತೆ ನಾಶವಾಗುವವರೆಗೂ ಇರಬೇಕು. ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಅವರನ್ನು ಪೂರ್ಣ ದೃಷ್ಟಿಯಲ್ಲಿ ನೋಡಿದರೆ ಮಾತ್ರ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಇಬ್ಬರು ನಾಯಕರು ಸಮಾನತೆಗೆ ಹೋರಾಡಿದವರು ಎಂದರು.

ಈ ವೇಳೆ 2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ್ದ ಮಕ್ಕಳನ್ನು ಅಭಿನಂದಿಸಲಾಯಿತು. ಇದಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ವೃತ್ತದಿಂದ ಗುರುಭವನ ದವರೆವಿಗೆ ಬಾಬು ಜಗಜೀವನರಾಮ್ ಅವರ ಭಾವಚಿತ್ರ ಮೆರವಣಿಗೆ ನಡೆಯಿತು.

ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಜೇಂದ್ರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ರವಿ ಬಸ್ತೀಪುರ, ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಹಸೀಲ್ದಾರ್ ಬಸವರಾಜು, ಡಿವೈಎಸ್ಪಿ ಎಂ.ಧಮೇಂದ್ರ, ಬಿಇಒ ಮಂಜುಳಾ, ಶಿಕ್ಷಕ ದೊರೆಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಡಾ.ಬಾಬು ಜಗಜೀವನರಾಮ್ ಸಂಘಗಳ ಒಕ್ಕೂಟ ಅಧ್ಯಕ್ಷ ಬಾಲರಾಜು, ನಗರಸಭೆ ಸದಸ್ಯ ಭಾಗ್ಯಾ ಸೋಮಣ್ಣ, ನಗರಸಭೆ ಪ್ರಭಾರ ಪೌರಾಯುಕ್ತ ಪರಶಿವಮೂರ್ತಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net