3.80 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Dr. Babu Jagjivanaram Jayanti Mandya
Published on

ಮಂಡ್ಯ: ಜಿಲ್ಲೆಯಲ್ಲಿ 3.80 ಕೋಟಿ ರೂ ವೆಚ್ಚದಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ ಭವನ ನಿರ್ಮಾಣ ಮಾಡಲಾಗುವುದು. ಇದಕ್ಕೆ ಅನುದಾನ ಕೊರತೆ ಉಂಟಾದರೆ ಹೆಚ್ಚುವರಿ ಹಣ ಪಡೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಡಾ.ಬಾಬು ಜಗಜೀವನರಾಮ್ ಅವರ 118ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ದೇಶ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ ಮಹನೀಯರ ಕುರಿತು ಯುವ ಪೀಳಿಗೆಗೆ ಅರಿವು ಮೂಡಿಸುವ ಸಲುವಾಗಿ ಅನೇಕ ಸಾಧಕರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

1935ರಲ್ಲಿ ಅಖಿಲ ಭಾರತ ಶೋಷಿತ ಸಮುದಾಯಗಳ ಹೋರಾಟ ಸಮಿತಿಯನ್ನು ರಚಿಸಿ ಅಸ್ಪೃಶ್ಯತೆ ವಿರುದ್ದ ಮಹಾನ್ ವ್ಯಕ್ತಿತ್ವ ಬಾಬೂಜಿ ಅವರದು. ಸುದೀರ್ಘ 30 ವರ್ಷ ಕೇಂದ್ರ ಮಂತ್ರಿಗಳಾಗಿದ್ದರು. ನಂತರ ಭಾರತದ ಉಪ ಪ್ರಧಾನಿಯಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ವೃತ್ತಿ ಜೀವನದುದ್ದಕ್ಕೂ ದೇಶದ ಅಭಿವೃದ್ಧಿಗೆ ಶೋಷಿತರ ಏಳಿಗೆಗಾಗಿ ಶ್ರಮಿಸಿದವರು. ಬಾಬೂಜಿ ಯಾವುದೇ ಸಮಾಜಕ್ಕೆ ಸೀಮಿತವಲ್ಲ. ಅವರು ನಮ್ಮ ದೇಶದ ಆಸ್ತಿ. ಸರ್ವಕಾಲಕ್ಕೂ ಸರ್ವರೂ ಪ್ರೀತಿಸುವ ನಾಯಕರ ಸಾಲಿನಲ್ಲಿ ಇವರು ಸಹ ಒಬ್ಬರು. ಜವಾಹರಲಾಲ್ ನೆಹರೂ, ಡಾ.ಅಂಬೇಡ್ಕರ್, ಗಾಂಧೀಜಿ ಅವರಂತಹ ಮಹನೀಯರು ಹೇಳಿದಂತೆ ಇವತ್ತಿಗೂ ಭಾರತ ಜ್ಯಾತ್ಯಾತೀತ ರಾಷ್ಟ್ರವಾಗಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಜಾರಿಗೆ ತಂದ 5 ಗ್ಯಾರಂಟಿ ಯೋಜನೆಯ ಮೂಲಕ ರಾಜ್ಯದ ಪ್ರತಿ ಮನೆಗೂ 5 ಸಾವಿರ ರೂ ತಲುಪುತ್ತಿದೆ. ಹಾಲಿನ ಮೇಲಿನ ಹೆಚ್ಚುವರಿಯಾಗಿ ನಿಗದಿಪಡಿಸಿರುವ 4 ರೂಪಾಯಿಯನ್ನು ರೈತರಿಗೆ ನೀಡಲಾಗುತ್ತಿದೆ. ಯಾರ ಆಡಳಿತ ಅವಧಿಯಲ್ಲಿ ದೇಶದ ಅಭಿವೃದ್ಧಿ ಹಾಗೂ ಜನರಿಗೆ ಶಕ್ತಿಯನ್ನು ತುಂಬುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಅರ್ಥ ಮಾಡಿಕೊಂಡಾಗ ಮಾತ್ರ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರವಿಕುಮಾರ್ ಗಣಿಗ, ಬಾಂಗ್ಲಾ ವಿಮೋಚನೆಯ ಸಂದರ್ಭದಲ್ಲಿ ದೇಶದಲ್ಲಿ ಉದ್ಭವಿಸಿದ ಆಹಾರ ಕೊರತೆಯಿಂದ ಸಾರ್ವಜನಿಕರು ತತ್ತರಿಸುತ್ತಿದ್ದಾಗ ಸರ್ಕಾರಿ ಮತ್ತು ಖಾಸಗಿ ಗೋದಾಮುಗಳಲ್ಲಿ ಶೇಖರಿಸಿ ಇಡಲಾಗಿದ್ದ ಆಹಾರ ಧಾನ್ಯಗಳನ್ನು ದೇಶದ ಜನತೆಗೆ ನೀಡಿ ಹಸಿವು ನೀಗಿಸಿದ ಮಹಾನ್ ಚೇತನ ರಾಜಕೀಯ ಮುತ್ಸದ್ದಿ ಬಾಬು ಜಗಜೀವನರಾಮ್ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮುಡಾ ಅಧ್ಯಕ್ಷ ನಯೀಂ, ಮಂಡ್ಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಮಂಜು, ಡಾ.ಬಾಬು ಜಗಜೀವನರಾಮ್ ಸಂಘದ ಜಿಲ್ಲಾಧ್ಯಕ್ಷ ಎನ್.ಆರ್.ಚಂದ್ರ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಎಲ್.ಸಂದೇಶ್, ಮುಖಂಡರಾದ ಕೃಷ್ಣ, ಸಿ.ಕೆ.ಪಾಪಯ್ಯ ಇತರರಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು. ಬಾಬು ಜಗಜೀವನರಾಮ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಚರ್ಚಾ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲೆ ಮತ್ತು ಕಾಲೇಜಿನ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಇದಕ್ಕೂ ಮುನ್ನ ಆಯೋಜಿಸಿದ್ದ ಮೆರವಣಿಗೆಗೆ ಡಿಸಿ ಕಚೇರಿ ಎದುರು ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಟಮಟೆ, ಪೂಜಾ ಕುಣಿತ, ಪೂರ್ಣಕುಂಭ ಹೊತ್ತು ಮಹಿಳೆಯರ ತಂಡ ಅಂಬೇಡ್ಕರ್ ಭವನದವರೆಗೆ ಸಾಗಿತು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಪೌರಾಯುಕ್ತೆ ಪಂಪಶ್ರೀ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net