ಡಾ.ಬಾಬು ಜಗಜೀವನರಾಂ ಜಯಂತಿ ಆಚರಣೆ |ಸಮತಾವಾದಿಯ ವಿಚಾರಗಳು ಪ್ರಸ್ತುತ

Dr.Babujagajeevanram
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಡಾ.ಬಾಬು ಜಗಜೀವನ ರಾಂ ಜಯಂತಿ ಆಚರಿಸಲಾಯಿತು. ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ, ಕುಲಸಚಿವ ಬಿ.ಎಸ್.ನಾವಿ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಕರ ಮತ್ತಿತರರಿದ್ದಾರೆ.
Published on

ವಿಜಯಪುರ: ಡಾ.ಬಾಬು ಜಗಜೀವನರಾಂ ಅವರ ವಿಚಾರಗಳನ್ನು ಮತ್ತು ನೀತಿಗಳನ್ನು ಪ್ರಸ್ತುತ ದಿನಮಾನಗಳಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ದೇಶದ ಸಮಗ್ರ ಅಭಿವೃದ್ಧಿಯನ್ನು ಸಾಧಿಸಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಘಟಕದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನ ರಾಂರ 116ನೇ ಜಯಂತಿ ಆಚರಣೆಯ ಅಧ್ಯಕತೆ ವಹಿಸಿ ಅವರು ಮಾತನಾಡಿದರು.

ಸಮತಾ ದಿವಸ ಎಂದು ಈ ದಿನವನ್ನು ಆಚರಿಸಲಾಗುತ್ತದೆ. ಡಾ. ಬಾಬು ಜಗಜೀವನರಾಂ ಅವರ ಜೀವನ ಹಲವಾರು ಆಯಾಮಗಳ ವ್ಯಕ್ತಿತ್ವವನ್ನು ಹೊಂದಿರುವAತದ್ದಾಗಿತ್ತು. ಸಮಾಜಕ್ಕೆ ಸಮಾನತೆಯ ಸಂದೇಶವನ್ನು ಸಾರಿದ ಸಂಪನ್ನ ರಾಜಕಾರಣಿ ಜಗಜೀವನ ರಾಂ. ಸುಮಾರು 40 ವರ್ಷಗಳ ಕಾಲ ಸಂಸತ್‌ನಲ್ಲಿ ಹಲವಾರು ಮಹತ್ತರ ಇಲಾಖೆಗಳ ನಿರ್ವಹಣೆಯನ್ನು ಮಾಡಿದ ಏಕೈಕ ರಾಜಕಾರಣಿ ಎಂದು ಹೇಳಿದರು.

ಅವರ ವಿಚಾರಗಳನ್ನು ಕುರಿತು ಸಂಶೋಧನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮುಖಾಂತರ ಇವರ ತತ್ವಗಳನ್ನು ಪ್ರಸಾರ ಮಾಡಬೇಕು. ಭಾರತದಲ್ಲಿ ಕೃಷಿಯೇ ಅಭಿವೃದ್ಧಿಯ ಮೂಲಾಧಾರವಾಗಿದೆ. ಈ ದೃಷ್ಟಿಯಿಂದ ಡಾ. ಬಾಬು ಜಗಜೀವನರಾಂ ದೇಶದ ಭೀಕರ ಬರಗಾಲದ, ಕ್ಷಾಮದ ಪರಿಸ್ಥಿತಿಯಲ್ಲಿ ಕೈಗೊಂಡ ಕ್ರಮಗಳು ದೇಶದ ಆಹಾರ ಕೊರತೆಯನ್ನು ನೀಗಿಸಿ ಸುಸ್ಥಿರ ಅಭಿವೃದ್ಧಿಗೆ ಸಹಾಯಕಾರಿಯಾಯಿತು ಎಂದರು.

ಕುಲಸಚಿವ ಪ್ರೊ.ಬಿ.ಎಸ್. ನಾವಿ ಮಾತನಾಡಿ, ಜಗಜೀವನ ರಾಂರು ದಕ್ಷ ಹಾಗೂ ಉತ್ತಮ ರಾಜಕಾರಣಿ ಅಷ್ಟೇ ಅಲ್ಲದೆ ಮತ್ಸದ್ದಿ ಆಡಳಿತಗಾರರು. ಪರರಿಗಾಗಿ ಸೇವೆ ಸಲ್ಲಿಸುವುದು ಹೇಗೆ ಎನ್ನುವುದನ್ನು ತಮ್ಮ ಜೀವನ ಶೈಲಿಯಿಂದ ತಿಳಿಸಿಕೊಟ್ಟವರು ಎಂದು ಹೇಳಿದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಕರ ಮಾತನಾಡಿ, ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ ಬದಲಾವಣೆಗೆ ಬಾಬು ಜಗಜೀವನರಾಂ ಮೂಲ ಕಾರಣರಾಗಿದ್ದಾರೆ. ದೀನ ದಲಿತರ ಏಳಿಗೆಗಾಗಿ ಸದಾ ಶ್ರಮಿಸುತ್ತಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ವ್ಯಕ್ತಿಯಾಗಿದ್ದರು. ಅವರ ತತ್ವಗಳನ್ನು ವಿದ್ಯಾರ್ಥಿನಿಯರು ಪಾಲಿಸುವ ಮೂಲಕ ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಹೇಳಿದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಕಣ್ಣನ್ ಮಾತನಾಡಿದರು. ಎಸ್‌ಸಿ, ಎಸ್‌ಟಿ ಕೋಶದ ನಿರ್ದೇಶಕಿ ಪ್ರೊ.ಲಕ್ಷ್ಮೀದೇವಿ ವೈ, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಡಾ.ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಶಾಂತಾದೇವಿ ಟಿ. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಡಾ.ಕೆ.ಪಿ. ಸುರೇಶ ವಂದಿಸಿದರು. ಸುನಿತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net