

ವಿಜಯವಾಣಿ ಸುದ್ದಿಜಾಲ ಉಡುಪಿ
ಸಾಮಾಜಿಕ ನ್ಯಾಯದ ಕಲ್ಪನೆಯೇ ಇಲ್ಲದ ಸಂದರ್ಭದಲ್ಲಿ, ಅಸ್ಪೃಶ್ಯತೆ, ಜಾತಿಪದ್ಧತಿಯೇ ಮೇಳೈಸುತ್ತಿದ್ದ ವೇಳೆಯಲ್ಲಿ ಡಾ. ಬಾಬು ಜಗಜೀವನ ರಾಮ್ ಅವುಗಳ ವಿರುದ್ಧ ಹೋರಾಡಿ, ಸಮಾಜದಲ್ಲಿ ಸಮಾನತೆ ತಂದರು. ಅದಕ್ಕಾಗಿ ಅವಮಾನ, ಆತಂಕಗಳನ್ನೂ ಎದುರಿಸಿದರು. ಭಾರತದ ಉಪಪ್ರಧಾನಿಯಾಗಿದ್ದ ಅವರು ಸಮಾನತೆಯ ಸಂಕೇತದ ಸ್ಥಾನದಲ್ಲಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಶ್ಲಾಘಿಸಿದರು.
ಉಡುಪಿಯ ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್ನಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಪ.ಜಾತಿ, ಪ.ಪಂಗಡಗಳ ಸಂಘಟನೆ ವತಿಯಿಂದ ಏ.5ರಂದು ಆಯೋಜಿಸಿದ್ದ ಡಾ. ಬಾಬು ಜಗಜೀವನ ರಾಮ್ ಅವರ 118ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಜ್ಜರಕಾಡು ಜಿ.ಶಂಕರ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ನಿಕೇತನಾ ವ್ಯಕ್ತಿಯೇ ಶಕ್ತಿಯಾದ ಡಾ. ಬಾಬು ಜಗಜೀವನ ರಾಮ್ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಪೊಲೀಸ್ ವರಿಷ್ಠ ಡಾ. ಅರುಣ ಕೆ., ಪೌರಾಯುಕ್ತ ಡಾ.ಉದಯ ಶೆಟ್ಟಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಎಂ. ಸ್ವಾಗತಿಸಿ, ವಂದಿಸಿದರು. ವಾರ್ಡನ್ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.
ದೇಶದಲ್ಲಿ ಬರಗಾಲ ಬಂದ ಸಂದರ್ಭದಲ್ಲಿ ಅವರು ಕೃಷಿ ಮಂತ್ರಿಯಾಗಿದ್ದರು. ಯಾರೂ ಊಹಿಸದಂತಹ ರೀತಿಯಲ್ಲಿ ಆಹಾರದ ಉತ್ಪಾದನೆ ಹಾಗೂ ಆಹಾರದ ವಿತರಣೆ ಮಾಡಿ 'ಹಸಿರು ಕ್ರಾಂತಿಯ ಹರಿಕಾರ'ರಾಗಿ ಗಮನ ಸೆಳೆದಿದ್ದರು. ಕಾರ್ಮಿಕ ಮಂತ್ರಿಯಾಗಿದ್ದಾಗ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸಿ, ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಹೀಗಾಗಿ ಜಗಜೀವನ ರಾಮ್ ಅವರ ಜನ್ಮದಿನಾಚರಣೆ ಮಹತ್ವದ್ದಾಗಿದೆ. | ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ