

ಮಂಡ್ಯ: ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ 38ನೇ ಪುಣ್ಯತಿಥಿಯನ್ನು ಜಿಲ್ಲಾಡಳಿತದಿಂದ ಶನಿವಾರ ನಗರದಲ್ಲಿ ಆಚರಣೆ ಮಾಡಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನದಲ್ಲಿರುವ ಡಾ.ಬಾಬು ಜಗಜೀವನ ರಾಂ ಅವರ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾಲಾರ್ಪಣೆ ಮಾಡಿ ನಮಿಸಿದರು. ಇದೇ ಸಂದರ್ಭದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ, ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಭವನ ನಿರ್ಮಾಣಕ್ಕೆ ಮನವಿ: ಇಲ್ಲಿನ ವಿವೇಕಾನಂದನಗರದಲ್ಲಿ ಮುಡಾ ವತಿಯಿಂದ 100+200 ಅಡಿ ನಿವೇಶನವನ್ನು ಡಾ. ಬಾಬು ಜಗಜೀವನ ರಾಂ ಭವನ ನಿರ್ಮಾಣಕ್ಕೆ ಮಂಜೂರು ಮಾಡಿದ್ದು, ತ್ವರಿತವಾಗಿ ನಿರ್ಮಿಸುವಂತೆ ಡಾ.ಬಾಬು ಜಗಜೀವನ ರಾಂ ಸಂಘಗಳ ಒಕ್ಕೂಟ ಜಿಲ್ಲಾ ಶಾಖೆಯಿಂದ ಪದಾಧಿಕಾರಿಗಳು ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಆರ್.ಚಂದ್ರಶೇಖರ್, ಕಾಂತರಾಜ್, ಕೆಂಪಯ್ಯ, ಎಂ.ಪಿ.ಚಂದ್ರಶೇಖರ್, ಬಿಳಿಯಪ್ಪ, ಶಾಂಭವಿ, ಶಂಭು ಮೊತ್ತಹಳ್ಳಿ, ಶಂಕರ್, ಶಿವಭೋರ ಹಂಪಾಪುರ, ಪುಟ್ಟರಾಜು ಇತರರಿದ್ದರು.