

ಜಗಳೂರು: ಡಾ.ಬಾಬು ಜಗಜೀವನ್ ರಾಂ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾಲೂಕಿನ ತೊರೆಸಿದ್ದಿಹಳ್ಳಿ ಗ್ರಾಮದಲ್ಲಿ ದಲಿತ ಸಮುದಾಯದಲ್ಲಿ ಉಂಟಾಗಿದ್ದ ವೈಮನಸ್ಯ ನಿವಾರಣೆಗಾಗಿ ಸೋಮವಾರ ಶಾಂತಿ ಸಭೆ ನಡೆಸಲಾಯಿತು.
ಚರ್ಮ ಮತ್ತು ಕೈಗಾರಿಕೆ ಅಭಿವೃದ್ಧಿ ನಿಗಮದಿಂದ ಡಾ.ಬಾಬು ಜಗಜೀವನ್‌ರಾಂ ಭವನ ನಿರ್ಮಾಣಕ್ಕೆ ಸರ್ಕಾರ 1 ಕೋಟಿ ರೂ. ಮಂಜೂರು ಮಾಡಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳದೇ ಸಣ್ಣ ವೈಮನಸ್ಸಿಗಾಗಿ ಭವನ ಬೇಡ ಎಂದು ವಿರೋಧಿಸುವುದು ಸರಿಯಲ್ಲ. ಎಲ್ಲರೂ ಒಂದಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ. ಮಹೇಶ್ವರಪ್ಪ ಮನವೊಲಿಸಿದರು.
ಚರ್ಮ ಕುಟೀರ ವನ ನಿರ್ಮಾಣದಿಂದ ಸುತ್ತಮುತ್ತಲ ಗ್ರಾಮಗಳ ದಲಿತ ಯುವ ಸಮೂಹಕ್ಕೆ ಉದ್ಯೋಗ ಅಥವಾ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ಒಮ್ಮೆ ಕೈ ತಪ್ಪಿ ಹೋದರೆ ಮುಂದೆ ಅವಕಾಶ ಸಿಗುವುದಿಲ್ಲ. ಹಾಗಾಗಿ, ಯೋಚಿಸಿ ನಿರ್ಧಾರಕ್ಕೆ ಬನ್ನಿ ಎಂದು ಸಲಹೆ ನೀಡಿದರು.
ಸಿಪಿಐ ಶ್ರೀನಿವಾಸ್ ಮಾತನಾಡಿ, ಭವನ ನಿರ್ಮಾಣ ಮತ್ತು ದಲಿತರಿಗೆ 50 ಮನೆಗಳ ನಿರ್ಮಾಣಕ್ಕೆ ಒಂದು ವರ್ಕಿಂಗ್ ಕಮಿಟಿ, ಮತ್ತೊಂದು ನಾನ್ ವರ್ಕಿಂಗ್ ಕಮಿಟಿ ರಚನೆಯಿಂದ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.
ತಾಪಂ ಇಓ ಚಂದ್ರಶೇಖರ್ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ತಾಲೂಕು ಮಟ್ಟದ ಅಧಿಕಾರಿಗಳು ಸಹಕಾರ ನೀಡುತ್ತಾರೆ. ಊರಿನವರೆಲ್ಲ ಒಂದಾಗಿ ಕೂಡಿ ಬಾಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಗೌರಿಪುರ ಕುಬೇರಪ್ಪ ಮಾತನಾಡಿ, ಲೀಡ್ಕರ್ ಚರ್ಮ ಕುಟೀರ ಭವನ ಮಂಜೂರಾಗಿರುವುದು ನಮ್ಮ ಸೌಭಾಗ್ಯ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮರೆಯಬೇಕು ಎಂದು ಮನವಿ ಮಾಡಿದರು.
ದಲಿತ ಮುಖಂಡ ಟಿ. ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯ ತಿಪ್ಪೇಸ್ವಾಮಿ, ಗ್ರಾಪಂ ಅಧ್ಯಕ್ಷೆ ಶ್ರುತಿ ಪ್ರಕಾಶ್, ಗ್ರಾಪಂ ಸದಸ್ಯ ತಿಮ್ಮಯ್ಯ, ಕಣಿಮಕ್ಕ, ರೆಡ್ಡಿ ಸಮುದಾಯದ ಪ್ರಕಾಶರೆಡ್ಡಿ, ರಾಮರೆಡ್ಡಿ, ಕೃಷ್ಣಾರೆಡ್ಡಿ, ದಸಂಸ ಮುಖಂಡ ಮಲ್ಲೇಶ್ ಮಾತನಾಡಿ, ಸೌಹಾರ್ದದಿಂದ ಬಾಳುವುದಾಗಿ ಭರವಸೆ ನೀಡಿದರು.
ಗ್ರೇಡ್2 ತಹಸೀಲ್ದಾರ್ ಮಂಜಾನಂದ, ಆರ್.ಐ. ಕುಬೇರ್ ನಾಯ್ಕ ಸೇರಿದಂತೆ ಇದ್ದರು.