

ಚಿತ್ರದುರ್ಗ: ದೇಶದವಿಂದು ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ, ಅನ್ಯ ದೇಶಗಳಿಗೆ ರಫ್ತು ಮಾಡುತ್ತಿರುವುದಕ್ಕೆ ಡಾ. ಬಾಬು ಜಗಜೀವನ ರಾಂ ಅವರ ದೂರದೃಷ್ಟಿ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಹೇಳಿದರು.
ನಗರದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಬಾಬೂಜಿ ಅವರ 39ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಬಾಬೂಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸ್ವಾತಂತ್ರಾೃನಂತರದಲ್ಲಿ ದೇಶದಲ್ಲಿದ್ದ 40 ಕೋಟಿ ಜನರ ಹಸಿವು ನೀಗಿಸುವುದು ಸರ್ಕಾರದ ಕೆಲಸವಾಗಿತ್ತು. ಅಂದಿನ ಕೇಂದ್ರ ಕೃಷಿ ಸಚಿವ ಜಗಜೀವನರಾಂ ನಮ್ಮಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಗೆ ಕ್ರಮ ವಹಿಸಿ ಕೃಷಿಯಲ್ಲಿ ಕ್ರಾಂತಿ ನಡೆಸಿದ್ದರ ಫಲವಾಗಿ ನಾವಿಂದು ಆಹಾರೋತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ಬಾಬೂಜಿ ಅವರ ಅಧಿಕಾರಾವಧಿಯಲ್ಲಿ ಜಾರಿಗೆ ಬಂದ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಇವತ್ತಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರಾೃನಂತರದಲ್ಲಿ ಇವರು ಸಲ್ಲಿಸಿದ ಸೇವೆ ಅನನ್ಯ. ಉಪ ಪ್ರಧಾನಿಯಾಗಿದ್ದ ಅವರು ಪ್ರಧಾನಿಯಾಗುವ ಅರ್ಹತೆ ಹೊಂದಿದ್ದರೂ ನಾನಾ ಕಾರಣಗಳಿಂದ ವಂಚಿತರಾದರು ಎಂದು ತಾಜ್‌ಪೀರ್ ವಿವರಿಸಿದರು.
ಪಕ್ಷದ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಜಯಣ್ಣ ಮಾತನಾಡಿ, ತಮ್ಮ ಜೀವನದಲ್ಲಿ ತಾವು ಅನುಭವಿಸಿದ ಕಷ್ಟಗಳನ್ನು ಬೇರೆಯವರು ಅನುಭವಿಸಬಾರದೆಂದು ಬಾಬೂಜಿ, ಹಲವು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದರು. ಅವರು ನಮ್ಮ ಪಕ್ಷದವರು ಎಂಬುದು ಹೆಮ್ಮೆಯ ವಿಷಯ. ಚುನಾವಣೆವೊಂದರ ಸಮಯದಲ್ಲಿ ಅವರು ಚಿತ್ರದುರ್ಗಕ್ಕೂ ಭೇಟಿ ಕೊಟ್ಟಿದ್ದರು ಎಂದರು.
ಸಂಪತ್‌ಕುಮಾರ್,ಡಿ.ಎನ್.ಮೈಲಾರಪ್ಪ, ಲೋಕೇಶ್, ಪೈಲ್ವಾನ್ ತಿಪ್ಪೇಸ್ವಾಮಿ, ಮುದಸಿರ್, ಪ್ರಕಾಶರಾಮನಾಯ್ಕ, ಭೂತೇಶ್, ಅಶ್ವಿನ್, ಸುದರ್ಶನ್,ಭರತ್,ಮಹಮ್ಮದ್ ಖುದ್ದೂಸ್ ಇತರರು ಇದ್ದರು.