ವಿಶ್ವವೇ ಒಪ್ಪಿಕೊಂಡ ನಾಯಕ ಅಂಬೇಡ್ಕರ್: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಣ್ಣನೆ

Dr.B.R.Ambedkar Jayantyutsava Mandya
Published on

ಮಂಡ್ಯ: ಇಡೀ ವಿಶ್ವವೇ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರ ಸಾಧನೆ ಗುರುತಿಸಿ, ಇಬ್ಬರೂ ವಿಶ್ವನಾಯಕರೆಂದು ಒಪ್ಪಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವವನ್ನು ಸಂವಿಧಾನ ಪೀಠಿಕೆ ಬೋದಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಉನ್ನತ ವ್ಯಕ್ತಿಯಿಂದ ಇಡಿದು ಕಟ್ಟ ಕಡೆಯ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಸಂವಿಧಾನವನ್ನು ಅಂಬೇಡ್ಕರ್ ಅವರು ರಚಿಸಿದ್ದಾರೆ. ಅಂತೆಯೇ ಭಾರತೀಯ ಸಂವಿಧಾನ ಯಾವುದೇ ವರ್ಗ ಮತ್ತು ಸಮಾಜಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದರು.

ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಭಾರತೀಯ ಸಂವಿಧಾನವನ್ನು ಅತ್ಯಂತ ಶ್ರೇಷ್ಟ ಸಂವಿಧಾನವೆಂದು ವಿಶ್ವವೇ ಹೇಳಿತು. ಸೂರ್ಯ ಚಂದ್ರ ಇರುವವರೆಗೂ ಅವರು ನೀಡಿರುವ ಕೊಡುಗೆ ಮತ್ತು ಸಾಧನೆ ಉಳಿದಿರುತ್ತವೆ. ಮುಖ್ಯವಾಗಿ ತುಳಿತಕ್ಕೊಳಗಾದವರಿಗೆ ಶಕ್ತಿ ತುಂಬುವ ಕೆಲಸವನ್ನು ಬಾಬಾ ಸಾಹೇಬ್ ಮಾಡಿದ್ದಾರೆ. ಸರ್ವಕಾಲಕ್ಕೂ ಸರ್ವರೂ ಒಪ್ಪುವಂತಹ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಅವರು ನಮಗೆ ನೀಡಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುಂದಿನ ಪೀಳಿಗೆಗೆ ನಾವು ಅವರಂತೆ ಕೊಡುಗೆಗಳು ನೀಡಬೇಕು ಎಂದರು.

ನಮ್ಮ ಸರ್ಕಾರ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣ ನೀಡಿದೆ. 2024-25ನೇ ಸಾಲಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಟಿ.ಎಸ್.ಪಿ ಯೋಜನೆಯಡಿ 100.26 ಕೋಟಿ ರೂ ಅನುದಾನ ನೀಡಲಾಗಿದೆ. ಜಿಲ್ಲೆಯಲ್ಲಿ ಡಾ.ಬಾಬು ಜಗಜೀವನ್ ರಾಂ ಭವನ ನಿರ್ಮಾಣ ಮಾಡಲು 3.85 ಕೋಟಿ ರೂ ಕೊಡಲಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ ದೀಪಕ್ ಮಾತನಾಡಿ, ಜಗತ್ತಿನಾದ್ಯಂತ 100ಕ್ಕೂ ಹೆಚ್ಚು ದೇಶ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತವೆ. ತಮ್ಮ ಬದುಕಿನುದ್ದಕ್ಕೂ ಶೋಷಿತರ ಏಳಿಗೆಗಾಗಿ ಶ್ರಮಿಸಿದವರು. ಅವರ ಹೋರಾಟ ಮತ್ತು ಸಂಪಾದಿಸಿದ ಜ್ಞಾನಕ್ಕಾಗಿ ಜಗತ್ತು ಅವರನ್ನು ಗೌರವಿಸುತ್ತದೆ. ಬಹುಜನರಿಗೆ ಹಸಿವು, ಶಿಕ್ಷಣ, ಸಾಮಾಜಿಕ ಭದ್ರತೆ ಸಿಗದಿರುವ ಕಾಲದಲ್ಲಿ ಎಲ್ಲರೂ ಸಮಾನರೆಂದು ಪ್ರತಿಪಾದಿಸಿದವರು ಎಂದು ಹೇಳಿದರು.

ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಿದ್ದರು. ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಂಡ್ಯ ಎಸಿ ಶಿವಮೂರ್ತಿ ಇತರರಿದ್ದರು.

ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ ರಾಂ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಾರ್ಲಾಪಣೆ ಮಾಡಿದರು.

ಬಳಿಕ ವರ್ಣರಂಜಿತ ರಥದ ಇರಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನೀಲಿ ಬಣ್ಣದ ಬಾವುಟ ಪ್ರದರ್ಶಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಡಿಸಿ ಕಚೇರಿಯಿಂದ ಅಂಬೇಡ್ಕರ್ ಭವನದವರೆಗೆ ನಡೆದ ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಮಹಿಳೆಯರು ಸಂವಿಧಾನ ಪುಸ್ತಕ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net