ಅಂಬೇಡ್ಕರ್‌ಗೆ ನೊಬೆಲ್ ಪ್ರಶಸ್ತಿ ಲಭಿಸಬೇಕಿತ್ತು: ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿಕೆ

Dr. B.R. Ambedkar Jayanti Mandya
Published on

ಮಂಡ್ಯ: ಆರ್ಥಿಕ ತಜ್ಞ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಬೇಕಿತ್ತು ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.

ನಗರದ ಪೊಲೀಸ್ ಕಾಲನಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಪದವಿ ಮತ್ತು ಪಿ.ಜಿ ಕಾಲೇಜು ಬಾಲಕಿಯರ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಅಂಗವಾಗಿ ‘ಬಾಬಾ ಸಾಹೇಬ್ ಒಂದು ಚಿಂತನೆ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 19ನೇ ಶತಮಾನದಲ್ಲಿಯೇ ಅರ್ಥಶಾಸದಲ್ಲಿ ಪ್ರಬಂಧ ಮಂಡಿಸಿ, ಆರ್ಥಿಕ ಕ್ಷೇತ್ರದ ಬೆಳೆವಣಿಗೆಗೆ ಪೂರಕ ಯೋಜನೆಗಳನ್ನು ನೀಡಿ ರಿಸರ್ವ್ ಬ್ಯಾಂಕ್ ಆ್ ಇಂಡಿಯಾ ಸ್ಥಾಪನೆಗೆ ಪ್ರೇರಣೆಯಾದರು. ಇಂತಹ ಆರ್ಥಿಕ ತಜ್ಞ ಅಂಬೇಡ್ಕರ್ ಅವರಿಗೆ ನೊಬೆಲ್ ಪ್ರಶಸ್ತಿ ಸ್ವಲ್ಪದರಲ್ಲಿಯೇ ಕೈತಪ್ಪಿತು ಎಂದು ವಿಷಾಧಿಸಿದರು.

ವಿಶ್ವಕ್ಕೆ ಜ್ಞಾನದ ಬೆಳಕಾಗಿರುವ ಅಂಬೇಡ್ಕರ್ ಅವರು ಸುಮಾರು 32 ಪದವಿ ಪಡೆದಿದ್ದಾರೆ. ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಓದಿದ್ದಾರೆ. ಅಂದಿನ ಕಾಲದಲ್ಲಿಯೇ ಇಂಗ್ಲೆಂಡ್, ಅಮೆರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ವ್ಯಾಸಂಗ ಮಾಡಿದ್ದಾರೆ. ಜ್ಞಾನದ ಸಂಕೇತವಾಗಿ ಅವರ ಪ್ರತಿಮೆಗಳನ್ನು ನಿರ್ಮಿಸಿ ವಿಶ್ವಜ್ಞಾನಿ ಎಂದು ಘೋಷಿಸಿ ಸ್ಮರಿಸುತ್ತಿದ್ದಾರೆ. ಅಂಬೇಡ್ಕರ್ ಅವರು 65 ವರ್ಷ ಬದುಕಿದ್ದರೂ 6 ಸಾವಿರ ವರ್ಷ ಕಳೆದರೂ ಮರೆಯದಂತ ಸಾಧನೆ, ಕೊಡುಗೆ ನೀಡಿದ್ದಾರೆ. ಸೂರ್ಯ, ಚಂದ್ರ ಇರುವವರೆಗೂ ಅಂಬೇಡ್ಕರ್ ಅವರು ಜೀವಂತವಾಗಿರುತ್ತಾರೆ. ಮಹಿಳೆಯರ ಸಬಲೀಕರಣಕ್ಕೆ, ಕಾರ್ಮಿಕರ ಹಕ್ಕುಗಳಿಗೆ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮಾಡಿದ್ದಾರೆ ಎಂದು ಹೇಳಿದರು.

ಈ ಶತಮಾನದ ಮಹಾಚೇತನ, ಮಹಾನಾಯಕರಾಗಿ ಜಗದಗಲ ನೆಲೆಗೊಂಡಿದ್ದಾರೆ. ಅಂಬೇಡ್ಕರ್ ಜಯಂತಿ ಒಂದು ದಿನಕ್ಕೆ ಸೀಮಿತವಲ್ಲ. ವರ್ಷ ಪ್ರತಿದಿನವೂ ಆಚರಿಸಿ, ಗೌರವ ಸಲ್ಲಿಸುವ ಏಕೈಕ ವ್ಯಕ್ತಿತ್ವ ಚೇತನ ಅಂಬೇಡ್ಕರ್. ವಿದ್ಯಾರ್ಥಿಗಳು ಸಂವಿಧಾನ ಮತ್ತು ಅಂಬೇಡ್ಕರ್ ರಚಿಸಿರುವ ಕೃತಿಗಳನ್ನು ಓದಿ. ಜ್ಞಾನದ ಸಂಕೇತವಾಗಿರುವ ಅನೇಕ ಬರಹ-ಭಾಷಣಗಳನ್ನು ಬಿಡುವಿದ್ದಾಗ ಓದಿಕೊಳ್ಳಿ. ಇದರಿಂದ ಉಪಯುಕ್ತ ಮಾಹಿತಿ ನಿಮಗೆ ಲಭ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಪ್ರತಿಭಾಂಜಲಿ ಪ್ರೊ.ಡೇವಿಡ್, ನಿಲಯ ಪಾಲಕರಾದ ವೈ.ಡಿ.ನಿರ್ಮಲಾ, ಎನ್.ಲತಾ, ಅಲಯನ್ಸ್ ಸಂಸ್ಥೆ ಜಿಲ್ಲಾ 2ನೇ ಉಪ ಗರ್ವನರ್ ಕೆ.ಎಸ್.ಚಂದ್ರಶೇಖರ್, ಕೃಷಿಕ ಅಲಯನ್ಸ್ ಸಂಸ್ಥೆ ಕಾರ್ಯದರ್ಶಿ ಮೋಹನ್‌ಕುಮಾರ್, ಖಜಾಂಚಿ ಎಸ್.ಸಿ.ಮಲ್ಲೇಶ್, ಎ. ಆರ್.ಕುಮಾರ್ ಇತರರಿದ್ದರು. ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ನಿವೃತ್ತ ವಿಭಾಗಿಯ ಪ್ರಬಂಧ ಕೆ.ರಾಮಕೃಷ್ಣ ಮತ್ತು ಹಿರಿಯ ಪ್ರಬಂಧಕ ಚಂದ್ರಹಾಸ್ ಅವರಿಗೆ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net