ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳಾಗಿ

24 apr tnp 04
ತಿ.ನರಸೀಪುರ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಇನ್‌ಸ್ಟೆಕ್ಟರ್ ಧನಂಜಯ ಉದ್ಘಾಟಿಸಿದರು. ಬೋಧಿರತ್ನ ಭಂತೇಜಿ, ಎಸ್.ಎನ್.ಸಿದ್ಧಾರ್ಥ, ಹರಿಹರ ಅನಂದಸ್ವಾಮಿ, ಕೆ.ಎನ್.ಪ್ರಭುಸ್ವಾಮಿ, ಅಲಗೂಡು ಚಂದ್ರಶೇಖರ್, ಬನ್ನಹಳ್ಳಿ ಸೋಮಣ್ಣ, ರಾಜಶೇಖರ ಮೂರ್ತಿ ಇತರರು ಇದ್ದರು.
Published on

ತಿ.ನರಸೀಪುರ: ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಯಾದರೆ ಸಾಲದು ಅವರ ನಿಜವಾದ ಅನುಯಾಯಿ ಆಗಬೇಕು. ಊರು ಕೇರಿಗಳ ಪ್ರವೇಶ ದ್ವಾರ, ರಸ್ತೆಗಳಲ್ಲಿ ರಾರಾಜಿಸುತ್ತಿರುವ ಅಂಬೇಡ್ಕರ್ ಅವರನ್ನು ಮೊದಲು ಮನ-ಮನೆಗೆ ಕೊಂಡೊಯ್ಯಬೇಕು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ಕಟ್ಟುಪಾಡುಗಳಲ್ಲಿ ನಮ್ಮನ್ನು ಕಟ್ಟಿಹಾಕಿರುವ ದೇವರನ್ನು ಮನೆಯೊಳಗೆ ಇರಿಸಿದ್ದೇವೆ. ಬದುಕನ್ನು ಕಟ್ಟಿಕೊಟ್ಟ ಬಾಬಾ ಸಾಹೇಬರನ್ನು ಅಭಿಮಾನಿಗಳಾಗಿ ಜಯಂತಿ ಉತ್ಸವಗಳಲ್ಲಿ ಮೆರೆಸಿ, ಬೀದಿಗಳಲ್ಲಿ ಬಿಟ್ಟು ಇತರರಿಂದ ಅಪಮಾನಿಸಲು ಎಡೆಮಾಡಿಕೊಡುತ್ತಿದ್ದೇವೆ ಎಂದು ವಾಜಮಂಗಲ ಘಟನೆ ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದರು.

ಅಭಿಮಾನ ಇಟ್ಟುಕೊಳ್ಳುವುದು, ಅಂಬೇಡ್ಕರ್ ಅನುಯಾಯಿ ಆಗುವುದು ನಿಜಕ್ಕೂ ಸವಾಲೆ. ಮೊದಲು ಮನೆಯವರನ್ನು, ಬೀದಿಯವರನ್ನು ಬಳಿಕ ಊರಿನವರನ್ನೇ ಎದುರಿ ಹಾಕಿಕೊಳ್ಳಬೇಕು. ಈಗಲೂ ಬಹುತೇಕ ಕಡೆ ಅಂಬೇಡ್ಕರ್ ಅಥವಾ ಪರಿಶಿಷ್ಟ ಜಾತಿಯವ ಎಂಬುದನ್ನು ಹೇಳಿಕೊಳ್ಳಲು ಹಿಂಜರಿಕೆ, ಕಿಳರಿಮೆ ಭಾವ ಇದೆ. ಅಂಬೇಡ್ಕರ್ ಅವರ ಬುದ್ಧ ಧರ್ಮದ ಪುನರುತ್ಥಾನದ ಕನಸನ್ನು ಸಾಕರಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬೌದ್ಧ ಮಂದಿರಗಳನ್ನು ಧ್ಯಾನಕ್ಕೆ, ಗ್ರಂಥಾಲಯವಾಗಿ ಹಾಗೂ ಉದ್ಯೋಗ ವಿನಿಮಯ ಕೇಂದ್ರವನ್ನಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ ಮಾತನಾಡಿ, ಅಂಬೇಡ್ಕರ್ ಮೇಲಿನ ಅಭಿಮಾನವನ್ನು ಜಯಂತಿ ಆಚರಣೆ ವೇಳೆ ಕುಣಿದು ಕುಪ್ಪಳಿಸುವ ಮೂಲಕ ವ್ಯಕ್ತಪಡಿಸುತ್ತಿದ್ದೇವೆ. ಅಂಬೇಡ್ಕರ್ ಚಿಂತನೆ ಹಾಗೂ ಬದುಕಿನ ಆದರ್ಶನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಅವರು ತೋರಿದ ಬುದ್ಧನ ಮಾರ್ಗದೆಡೆ ನಡೆಯುವ ಪ್ರಯತ್ನವೂ ಆಗುತ್ತಿಲ್ಲ. ಅಭಿಮಾನ ಇರುವ ಪ್ರತಿಯೊಬ್ಬರೂ ಅಂಬೇಡ್ಕರ್ ಅನುಯಾಯಿ ಆಗುವ ಬಗ್ಗೆ ಚಿಂತನೆ ಮಾಡಬೇಕೆಂದು ಕಿವಿಮಾತು ಹೇಳಿದರು.

ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ ಸಾನ್ನಿಧ್ಯ ವಹಿಸಿದ್ದರು. ಒಕ್ಕೂಟದ ಸಂಚಾಲಕ ಬನ್ನಹಳ್ಳಿ ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ಜನಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ ಅವರು ಅಂಬೇಡ್ಕರ್ ವಿಚಾರ ಕುರಿತು ಮಾತನಾಡಿದರು. ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಶಸ್ತಿ ಪುರಸ್ಕೃತ ಹಿರಿಯ ಹೋರಾಟಗಾರ ಹರಿಹರ ಆನಂದಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಕದಸಂಸ ರಾಜ್ಯ ವಿಭಾಗೀಯ ಸಂಚಾಲಕ ಆಲಗೂಡು ಚಂದ್ರಶೇಖರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಯಡದೊರೆ ಮಹದೇವಯ್ಯ, ಆಲಗೂಡು ಶಿವಣ್ಣ, ಕೆಬ್ಬೆಹುಂಡಿ ನಿಂಗರಾಜು, ಯರಗನಹಳ್ಳಿ ಸುರೇಶ್, ಸಿದ್ದರಾಜು, ಮುಖಂಡರಾದ ವಾಟಾಳ್ ನಾಗರಾಜು, ಕೆಂಪಯ್ಯನಹುಂಡಿ ರಾಜು, ಕನಾಯಕನಹಳ್ಳಿ ಮರಿಸ್ವಾಮಿ, ನರಗ್ಯಾತನಹಳ್ಳಿ ಮನೋಜ್, ಕರೋಹಟ್ಟಿ ರಜನಿ, ಅರ್ಜುನ್, ವಿನಯ್, ನಿಲಸೋಗೆ ಕುಮಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net