ಮನೆ ಮನಗಳಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ನಮನ

14 mbl ph 1
Published on

ಕೋಲಾರ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ 129ನೇ ಜನ್ಮ ದಿನವನ್ನು ಮನೆ, ಮನಗಳಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕರೊನಾದಿಂದ ಲಾಕ್‌ಡೌನ್ ಮುಂದುವರಿದಿರುವುದರಿಂದ ಅಬ್ಬರ, ಆಡಂಬರವಿಲ್ಲದೆ ಸರ್ಕಾರಿ ಕಚೇರಿ, ಸಮಾನ ಮನಸ್ಕರ ಮನೆ, ಸಂಘ ಸಂಸ್ಥೆಗಳ ಕಚೇರಿಗಳಲ್ಲಿ ಕಾರ್ಯಕ್ರಮ ನಡೆಯಿತು.

ವಿವಿಧ ದಲಿತ ಸಂಘಟನೆಗಳ ಮುಖಂಡರ ಕರೆ ಮೇರೆಗೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮನೆಗಳಲ್ಲೇ ಅಂಬೇಡ್ಕರ್ ಭಾವಚಿತ್ರದ ಮುಂದೆ ಮೇಣದ ಬತ್ತಿ ಬೆಳಗಿಸಿ ಹೋರಾಟದ ಹಾಡುಗಳ ಮೂಲಕ ಗೌರವ ಸಮರ್ಪಿಸಿದರು.

ಡಿಸಿಯಿಂದ ಪುಷ್ಪಾರ್ಚನೆ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕರೊನಾ ಇರದಿದ್ದರೆ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಬಹುದಾಗಿತ್ತು. ಆದರೂ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ, ಗ್ರಾಮ ಪಂಚಾಯಿತಿಗಳಲ್ಲಿ ಅಂಬೇಡ್ಕರ್‌ಗೆ ನಮನ ಸಲ್ಲಿಸಲಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಸಿಬ್ಬಂದಿಯೊಂದಿಗೆ ಅಂಬೇಡ್ಕರ್‌ಗೆ ನುಡಿ ನಮನ ಸಲ್ಲಿಸಿದರು. ಸಮಾಜ ಕಲ್ಯಾಣ ಇಲಾಖೆ ಸೇರಿ ವಿವಿಧೆಡೆ ಸರಳವಾಗಿ ಆಚರಿಸಲಾಯಿತು.

ಡಿಡಿಪಿಐ ಕಚೇರಿಯಲ್ಲಿ ಸ್ಮರಣೆ: ನಗರದ ಡಿಡಿಪಿಐ ಕಚೇರಿಯಲ್ಲೂ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಡಿಡಿಪಿಐ ರತ್ನಯ್ಯ, ಮುಖ್ಯಶಿಕ್ಷಕರಾದ ಜಿ.ಶ್ರೀನಿವಾಸ್, ಆರ್.ಶ್ರೀನಿವಾಸ್ ಇದ್ದರು.

ಡಿಎಸ್‌ಎಸ್: ಡಿಎಸ್‌ಎಸ್ ವತಿಯಿಂದ ನಗರದ ನಚಿಕೇತ ನಿಲಯದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಹಾರ ಸಲ್ಲಿಸಿ ನಗರಸಭೆ ಸದಸ್ಯ ಅಂಬರೀಷ್, ಮುಖಂಡರಾದ ವಕ್ಕಲೇರಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ವಿಜಯಕುಮಾರ್, ಡಿಪಿಎಸ್ ಮುನಿರಾಜು, ಹೂವಳ್ಳಿ ನಾಗೇಶ್ ಇನ್ನಿತರರು ಹೋರಾಟದ ಹಾಡು ಹಾಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ ಹಾಗೂ ಇವರ ತಂಡ ಡಿಸಿ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗೆ ದಲಿತ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.

ಸಂಸದರಿಂದ ಮಾಲಾರ್ಪಣೆ:

ಸಂಸದ ಎಸ್.ಮುನಿಸ್ವಾಮಿ ಬಿಜೆಪಿ ಮುಖಂಡರೊಂದಿಗೆ ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡವರಿಗೆ ಆಹಾರ ಹಾಗೂ ತರಕಾರಿ ವಿತರಣೆ ಮಾಡಿದರು. ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ, ವಕ್ಫ್ ಸಮಿತಿ ಅಧ್ಯಕ್ಷ ಜಾಮೀಲ್ ಪಾಷಾ ಇನ್ನಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net