ಪ್ರತಿಭೆಯನ್ನು ಜಾತಿಯಿಂದಲ್ಲ, ವ್ಯಕ್ತಿತ್ವದಿಂದ ಅಳೆಯಬೇಕು :  ಸಿಎಂ ಸಿದ್ದರಾಮಯ್ಯ ಅಭಿಮತ

CM
Published on

ಬೆಂಗಳೂರು: ಅಸ್ಪೃಶ್ಯತೆ ಸಮಾಜಕ್ಕೆ ಅಂಟಿದ ದೊಡ್ಡ ಶಾಪ. ಇಂತಹ ಅಸ್ಪೃಶ್ಯತೆ ಮತ್ತು ದಾಸ್ಯದಿಂದ ಮುಕ್ತಿ ಪಡೆಯಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೀ ಕಲ್ಚರ್ ಸಂಸ್ಥೆ ನಗರದ ಕೊಂಡಜ್ಜಿ ಸಭಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಬಿ.ಎಂ. ತಿಪ್ಪೇಸ್ವಾಮಿ ಅವರ ‘ಮುಟ್ಟಿಸಿಕೊಂಡವರು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಶೋಷಿತರಿಗೆ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ಬಂದಾಗ ಮಾತ್ರ ಜಾತಿ ಪ್ರಭಾವ ಕಡಿಮೆ ಆಗುತ್ತದೆ. ಜಾತಿಗೆ ಚಲನೆ ಇಲ್ಲ. ವರ್ಗಕ್ಕೆ ಮಾತ್ರ ಚಲನೆ ಇದೆ. ಪ್ರತಿಭೆಯನ್ನು ಜಾತಿಯಿಂದಲ್ಲ ವ್ಯಕ್ತಿತ್ವದಿಂದ ಅಳೆಯಬೇಕು ಎಂದರು.

ತಿಪ್ಪೇಸ್ವಾಮಿ ಅವರು ಜನಪರ ವಿಚಾರಗಳಲ್ಲಿ ಮುಲಾಜು ನೋಡದೆ ಮಾತನಾಡುತ್ತಿದ್ದರು. ಅತ್ಯಂತ ನಿಷ್ಠುರವಾಗಿ ಸತ್ಯವನ್ನು ಹೇಳುತ್ತಿದ್ದರು. ಆ ಕಾರಣಕ್ಕಾಗಿಯೇ ಅವರು ಹಲವು ಬಾರಿ ಸಮಸ್ಯೆಗೆ ಸಿಕ್ಕಿಕೊಂಡರು. ಅವರ ಜೊತೆ ನಾನೂ 1985ರಿಂದ ಶಾಸಕನಾಗಿದ್ದೆ. ಸಚಿವರಾಗುವ ಎಲ್ಲಾ ಅರ್ಹತೆಗಳಿದ್ದರೂ ಶಾಸಕಾಂಗ ಪಕ್ಷದ ಉಪನಾಯಕರಾದರೆ ಹೊರತು ಸಚಿವರಾಗಲಿಲ್ಲ ಎನ್ನುವ ಬೇಸರ ನನಗೂ ಇದೆ ಎಂದು ಹೇಳಿದರು.

ತಿಪ್ಪೇಸ್ವಾಮಿ ತಮ್ಮ ಸಮಾಜ, ಸಮುದಾಯದ ಪ್ರಗತಿ ಮತ್ತು ಅಭಿವೃದ್ಧಿಗೆ ಸದಾ ತುಡಿಯುತ್ತಿದ್ದರು. ಅಂಬೇಡ್ಕರ್ ಅವರೂ ಇಡೀ ಸಮಾಜ ಮತ್ತು ಸಮುದಾಯಕ್ಕಾಗಿ ತಮ್ಮ ಶಿಕ್ಷಣ ಮತ್ತು ಜ್ಞಾನವನ್ನು ಮುಡಿಪಾಗಿಟ್ಟು ಹೋರಾಡಿದರು. ಈಗ ಬಹಳಷ್ಟು ಮಂದಿ ಶಿಕ್ಷಿತರು ತಮ್ಮ ಸಮುದಾಯದಿಂದ ದೂರ ಉಳಿಯುತ್ತಾರೆ ಎಂದ ಸಿಎಂ, ಸಮಾಜ ಸಮಾನ ಅವಕಾಶಗಳಿಂದ ಪರಿವರ್ತನೆ ಆದಾಗ ಮೀಸಲಾತಿ ಅಗತ್ಯವಿಲ್ಲ. ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಅಗತ್ಯ ಎನ್ನುವ ಅಂಬೇಡ್ಕರ್ ಅವರ ಮಾತನ್ನು ಸ್ಮರಿಸಿದರು.

ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ದಾವಣಗೆರೆಯ ವಿದ್ಯಾನಗರವನ್ನು ನಿರ್ಮಾಣ ಮಾಡಿದವರು ತಿಪ್ಪೇಸ್ವಾಮಿ. ಈಗ ಅದು ಪ್ರತಿಷ್ಠಿತ ಬಡಾವಣೆಯಾಗಿದೆ. ಶಿಕ್ಷಣಕ್ಕೂ ಅವರು ಪ್ರೋತ್ಸಾಹ ನೀಡಿದ್ದರು ಎಂದು ನೆನಪಿಸಿಕೊಂಡರು.

ಕೃತಿಯ ಸಂಪಾದಕಿ ಬಿ.ಟಿ. ಜಾಹ್ನವಿ ಮಾತನಾಡಿ, ತಿಪ್ಪೇಸ್ವಾಮಿ ಕುಟುಂಬದವರು, ಒಡನಾಡಿಗಳು ಹಾಗೂ ಶಿಷ್ಯರು ಬರೆದ ಲೇಖನಗಳ ಸಂಗ್ರಹ ಇದಾಗಿದೆ. ಕರ್ನಾಟಕದ ಹೊಸ ತಲೆಮಾರಿನ ಓದುಗರಿಗೆ ಈ ಪುಸ್ತಕ ಮುಖ್ಯ ಎಂದರು.

ಭಾರತ್ ಸ್ಕೌಟ್ ಅಂಡ್ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ರಾಜ್ಯಸಭಾ ಮಾಜಿ ಸದಸ್ಯ ಡಾ. ಎಲ್. ಹನುಮಂತಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net