

ಮಡಿಕೇರಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಗುಡ್ಡಗಾಡು ಓಟಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರು, ಗುಡ್ಡಗಾಡು ಓಟವು ವಿಶಿಷ್ಟವಾಗಿದ್ದು, ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತಾಗಬೇಕು. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಸದಾ ಚಟುವಟಿಕೆಯಿಂದ ಇರಬಹುದಾಗಿದೆ. ಇದರಿಂದ ಮಾನಸಿಕ ಒತ್ತಡ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
೧೪ ವರ್ಷದೊಳಗಿನ ಸುಮಾರು ೭೦ ಸ್ಪರ್ಧಿಗಳು ಗುಡ್ಡಗಾಡು ಕ್ರೀಡಾಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ ಕಾಲೇಜು ರಸ್ತೆ ಮಾರ್ಗ ಓಂಕಾರೇಶ್ವರ ದೇವಸ್ಥಾನ ಮೂಲಕ ಜಿಲ್ಲಾ ಕ್ರೀಡಾಂಗಣಕ್ಕೆ ತಲುಪಿದರು.
೧೪ ವರ್ಷ ಮೇಲ್ಪಟ್ಟು ೪೦ ಸ್ಪರ್ಧಿಗಳು ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇವರು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಿಂದ ಹೊರಟು ಚೈನ್‌ಗೇಟ್ ಮೂಲಕ ಸಂಪಿಗೆಕಟ್ಟೆ, ಕನ್ನಂಡಬಾಣೆ ಮೂಲಕ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ತಲುಪಿದರು.
೧೪ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಎಚ್.ಪಿ.ಶಾಂಭವಿ(ಪ್ರ), ಎಂ.ಎಸ್.ಕೃತಿಕ(ದ್ವಿ), ಎಚ್.ಎಂ.ಲೋಲಾಕ್ಷಿ(ತೃ), ಬಿ.ಜೆ.ಅಂಚಲ್(೪ನೇ ಸ್ಥಾನ), ಬಿ.ಡಿ.ಚಸ್ಮಿತ(೫ನೇ ಸ್ಥಾನ), ತಾನಿಯ(೬ನೇ ಸ್ಥಾನ) ಬಹುಮಾನ ಪಡೆದಿದ್ದಾರೆ. ೧೪ ವರ್ಷದೊಳಗಿನ ೧ ಕಿ.ಮೀ. ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ದೇವ್‌ಮಲ್ಲ ಮೇಥಿ(ಪ್ರ), ಎಸ್.ಡಿ.ಗವಿನ್ (ದ್ವಿ), ಸಿ.ಜಿ.ವಿಬಿಸ್(ತೃ), ಎಸ್.ಡಿ.ದಿಗಂತ್(೪ನೇ ಸ್ಥಾನ), ಕೆ.ಎಲ್.ಚಿರಾಗ್(೫ನೇ ಸ್ಥಾನ), ಎಸ್.ಪಿ.ಬೋಪಣ್ಣ(೬ನೇ ಸ್ಥಾನ) ಪಡೆದಿದ್ದಾರೆ.
ಪುರುಷರ ವಿಭಾಗದಲ್ಲಿ ೫ ಕಿ.ಮೀ ಓಟ ಸ್ಪರ್ಧೆಯಲ್ಲಿ ಕೊಡ್ಲಿಪೇಟೆಯ ಬಿ.ಪಿ.ಮನು(ಪ್ರ), ಪಾಲೂರು ಸೂದನ ಎಸ್.ಡಾಲಿ(ದ್ವಿ), ಬೆಟ್ಟತ್ತೂರು ಎಂ.ಎಂ.ಪವನ್(ತೃ), ಭಾಗಮಂಡಲದ ಕೆ.ಕೆ.ಯತಿನ್(೪ನೇ ಸ್ಥಾನ), ಸೂರ್ಲಬ್ಬಿಯ ಐ.ಎಲ್.ಸುಬ್ಬಯ್ಯ(೫ನೇ ಸ್ಥಾನ), ಬೆಟ್ಟಗೇರಿಯ ಪಿ.ಜಿ.ಲತೇಶ್(೬ನೇ ಸ್ಥಾನ) ಪಡೆದಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ, ಕ್ರೀಡಾ ತರಬೇತಿದಾರರಾದ ಆಂಥೋಣಿ ಡಿಸೋಜ, ಬಿಂದಿಯಾ, ಕೆ.ಮಹಾಬಲ ಇತರರು ಇದ್ದರು.
ಆ.೨೪ರಂದು ವಿವಿಧ ಸ್ಪರ್ಧೆ
ಆಗಸ್ಟ್, ೨೪ ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಷಟಲ್ ಬ್ಯಾಡ್ಮಿಟನ್ ಪಂದ್ಯಾವಳಿ ಹಾಗೂ ಈಜು ಸ್ಪರ್ದೆಯನ್ನು ಜನರಲ್ ತಿಮ್ಮಯ್ಯ ಒಳಾಗಂಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯ ಕ್ರೀಡಾ ಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ. ೦೮೨೭೨-೨೨೮೯೮೫, ೯೪೮೨೭೩೩೫೯೯ ನ್ನು ಸಂಪರ್ಕಿಸಬಹುದು.