

ಮಂಡ್ಯ: ವೈದ್ಯರು ಜೀವ ನೀಡುವ ದೇವರು ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ. ಹನುಮಂತು ಹೇಳಿದರು.
ನಗರದ ಹೊಸಹಳ್ಳಿಯ ಸರ್ಕಾರಿ ಆಯುರ್ವೇದ ಆಸ್ಪತ್ರೆ ಸಭಾಂಗಣದಲ್ಲಿ ಶುಗರ್ ಸಿಟಿ ಅಲಯನ್ಸ್ ಸಂಸ್ಥೆ, ಧನ್ವಂತರಿ ಅಲಯನ್ಸ್ ಸಂಸ್ಥೆ, ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ ಸಹಯೋಗದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಡಾ.ಬಿ.ಸಿ.ರಾಯ್ ಉತ್ತಮ ವೈದ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪುರಾಣ ಕಾಲದಿಂದಲೂ ವೈದ್ಯೋ ಹರಿ ನಾರಾಯಣ ಎಂಬ ಮಾತು ಸುಳ್ಳಲ್ಲ. ಎಲ್ಲರೂ ವೈದ್ಯರನ್ನು ದೇವರಂತೆ ಕಾಣುತ್ತಾರೆ. ವೈದ್ಯರು ಜೀವ ನೀಡುವ ಭಗವಂತ. ಹಾಗಾಗಿ ವೈದ್ಯರನ್ನು ಶ್ರೇಷ್ಟ ಭಾವನೆಯಿಂದ ಕಾಣುತ್ತಾರೆ. ಕೋವಿಡ್-19ರ ದಿನಗಳಲ್ಲಿ ದೇವಾಲಯದ ಬಾಗಿಲು ಮುಚ್ಚಿದ್ದವು. ಆದರೆ ಆಸ್ಪತ್ರೆಗಳು ತೆರೆದು ವೈದ್ಯರು ಮತ್ತು ಸಿಬ್ಬಂದಿಗಳು ಸೇವೆ ಮಾಡುತ್ತಿದ್ದರು ಎಂದು ನುಡಿದರು.
ಇತ್ತೀಚಿನ ದಿನಗಳಲ್ಲಿ ಆಯುಷ್ ಇಲಾಖೆ ತನ್ನದೇ ಆದ ಜನಸೇವೆ ನೀಡುತ್ತಿದೆ. ಅಲೋಪತಿ ವೈದ್ಯರಿಂದ ಆಗದ ಅದೆಷ್ಟೋ ರೋಗಗಳನ್ನು ಆಯುರ್ವೇದ ಔಷಧ ವಿಧಾನ ಮತ್ತು ಆಹಾರ ಪದ್ಧತಿಯಿಂದ ಗುಣಮುಖಪಡಿಸುವ ಕಾರ್ಯ ನಡೆಯುತ್ತಿದೆ. ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವು 1991ರಲ್ಲಿ ಭಾರತ ಸರ್ಕಾರವು ಜು.1ಅನ್ನು ವೈದ್ಯರ ದಿನವೆಂದು ಔಪಚಾರಿಕವಾಗಿ ಘೋಷಿಸಿದಾಗಿನಿಂದ ಹುಟ್ಟಿಕೊಂಡಿದೆ ಎಂದರು.
ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಪುಷ್ಪಾ, ಅಲಯನ್ಸ್ ಸಂಸ್ಥೆ 2ನೇ ಉಪ ಪ್ರಾಂತಪಾಲ ಚಂದ್ರಶೇಖರ್, ಶುಗರ್ ಸಿಟಿ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎನ್.ನಾಗರಾಜು, ಧನ್ವಂತರಿ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎನ್.ಗೋಪಾಲ್, ಮಾಜಿ ಅಧ್ಯಕ್ಷ ಲೋಕೇಶ್, ರಂಗಸ್ವಾಮಿ, ಪ್ರತಿಭಾಂಜಲಿ ಡೇವಿಡ್ ಇತರರಿದ್ದರು.