ಡಾ. ಅರವಿಂದ ನಾಯಕಗೆ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ

KMT ARAVIND
Published on

ಕುಮಟಾ: ಇಲ್ಲಿನ ಡಾ.ಎ.ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಅರವಿಂದ ಸುರೇಶ ನಾಯಕ ಅವರು, ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಏಷ್ಯಾ ಇಂಟರ್​ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯಡಿ ಏಷ್ಯಾ ಇಂಟರ್​ನ್ಯಾಷನಲ್ ಕಲ್ಚರ್ ಅಕಾಡೆಮಿಯಿಂದ ಶಿಕ್ಷಣ ಕ್ಷೇತ್ರದ ಸಾಧಕರಿಗೆ ನೀಡುವ ಡಾ. ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸ್ ಅವಾರ್ಡ್ 2024- 25 ನೇ ಸಾಲಿನ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ವಿಭಾಗಗಳಲ್ಲಿ ಡಾ. ಅರವಿಂದ ನಾಯಕ ಸಲ್ಲಿಸಿದ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಶನಿವಾರ ತಮಿಳುನಾಡಿನ ಹೊಸೂರಿನ ಹೋಟೆಲ್ ಹಿಲ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಡಾ.ಅರವಿಂದ ನಾಯಕ ಕಳೆದ ಎರಡು ದಶಕಗಳಿಂದ ಉಪನ್ಯಾಸಕರಾಗಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದು, ಹತ್ತು ವರ್ಷ ಎನ್​ಎಸ್​ಎಸ್ ಅಧಿಕಾರಿಯಾಗಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕರ್ನಾಟಕ ವಿಶ್ವವಿದ್ಯಾಲಯದಿಂದ ಉತ್ತಮ ಎನ್​ಎಸ್​ಎಸ್ ಅಧಿಕಾರಿ ಗೌರವ ಪಡೆದಿದ್ದಾರೆ. ಹಲವಾರು ಅಂತಾರಾಷ್ಟ್ರೀಯ ಮಟ್ಟದವರೆಗೂ ಪ್ರಬಂಧ ಮಂಡನೆ ಮಾಡಿದ್ದು, ಜರ್ನಲ್​ಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ.

ಇವರು ಬರೆದ ‘ಕರಾವಳಿ ತಳ ಸಮುದಾಯಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ಪುಸ್ತಕ ಗಮನಾರ್ಹವಾಗಿದೆ. ಸಾಮಾಜಿಕ ಸೇವೆ ಹಾಗೂ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಇವರು ಲಯನ್ಸ್ ಕ್ಲಬ್ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. ಭಾರತಿ ಎಂಬ ಸಂಸ್ಥೆ ಸ್ಥಾಪಿಸಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ, ಬಡ ರೋಗಿಗಳಿಗೆ ಸಹಾಯ, ಸರ್ಕಾರಿ ಶಾಲೆಗಳಿಗೆ ಉಚಿತ ಕಲಿಕಾ ಸಾಮಗ್ರಿ ವಿತರಣೆ, ರಕ್ತದಾನ, ನೇತೃದಾನ, ಅಂಗಾಂಗದಾನ ಮುಂತಾದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದಾರೆ. ಇವರ ಸಾಧನೆಗೆ ಕೆನರಾ ಕಾಲೇಜು ಸೊಸೈಟಿಯ ಆಡಳಿತ ಮಂಡಳಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net