ತಾಯಿಯ ಹೊಟ್ಟೆಯಿಂದಲೇ ಹಿಂದುತ್ವ ಕಲಿತಿದ್ದೇವೆ-ಡಾ.ಅಂಜಲಿ

congress-Meeting-in-honnavara
Published on

ಹೊನ್ನಾವರ: ಹುಟ್ಟು ಇದೇ ಧರ್ಮ, ಜಾತಿಯಲ್ಲಿ ಎಂಬುದು ಯಾರಿಗೂ ನಿಶ್ಚಯವಿಲ್ಲ. ಆದರೆ, ಜೆಪಿಗರು ಇದೇ ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ. ಕೇವಲ ಚುನಾವಣೆಗಾಗಿ, ಅಧಿಕಾರಕ್ಕಾಗಿ ಬಿಜೆಪಿಗರು ಮಾಡುವ ಹಿಂದುತ್ವದ ನಾಟಕಕ್ಕೆ ಯಾರೂ ಮರುಳಾಗಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಕರೆನೀಡಿದರು.
ನಗರಬಸ್ತಿಕೇರಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಭಾನುವಾರ ಅವರು ಮಾತನಾಡಿದರು. ಬಿಜೆಪಿಯ ಆಡಳಿತದಲ್ಲಿ ಅಭಿವೃದ್ಧಿ ಆಗಿಲ್ಲ, ಆದರೆ ರಾಜ್ಯದ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿತು. ಬಿಜೆಪಿಗರು ಆಶ್ವಾಸನೆ ನೀಡಿದಂತೆ ಜನಧನ್ ಖಾತೆಗೆ 15 ಲಕ್ಷ ರೂ. ಬಂದಿಲ್ಲ, ಬದಲಾಗಿ ಬ್ಯಾಂಕ್‌ಗಳು ಸೇವಾ ಶುಲ್ಕವನ್ನು ನಮ್ಮದೇ ಖಾತೆಯಿಂದ ಕಡಿತಗೊಳಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಜಿಲ್ಲೆಯ ಜನ ಮುಗ್ದರು, ಹೇಗೆ ಬೇಕಾದರೂ ವಂಚಿಸಬಹುದೆಂದು ಬಿಜೆಪಿಗರು ಅಂದುಕೊಂಡಿದ್ದಾರೆ. ಹೀಗಾಗಿ ನಮ್ಮ ಅಭ್ಯರ್ಥಿಯನ್ನ ಜಿಲ್ಲೆಯ ಜನರ ಧ್ವನಿಯಾಗಿ ಗೆಲ್ಲಿಸಬೇಕಿದೆ ಎಂದರು. ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಬಿಜೆಪಿಯ ಸಂಸದರು ಒಮ್ಮೆಯೂ ಸಂಸತ್‌ನಲ್ಲಿ ಯಾವ ಸಮಸ್ಯೆಯ ಬಗ್ಗೆಯೂ ಮಾತನಾಡಿಲ್ಲ. ಸಮಾನತೆಗಾಗಿ ಕಾಂಗ್ರೆಸ್ ಗೆಲ್ಲಬೇಕಿದೆ. ಬಿಜೆಪಿಯ ಈಗಿನ ಅಭ್ಯರ್ಥಿ ಆರು ಬಾರಿ ಶಾಸಕರಾದರೂ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಏನಿಲ್ಲ. ಅಂಥವರು ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವೇ ಎಂಬುದನ್ನ ಜನ ಯೋಚಿಸಿ ಮತ ಚಲಾಯಿಸಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಮಾತನಾಡಿದರು. ಗ್ಯಾರಂಟಿ ಅನುಷ್ಠಾನ ಪ್ರಾಕಾರದ ಅಧ್ಯಕ್ಷ ಸತೀಶ್ ನಾಯ್ಕ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ವೆಂಕಟೇಶ ಹೆಗಡೆ ಹೊಸಬಾಳೆ, ಗಣೇಶ್ ನಾಯ್ಕ ಮುಂತಾದವರಿದ್ದರು.

10 ವರ್ಷಗಳಲ್ಲಿ ಬೊಗಳೆ ಭಾಷಣ

10 ವರ್ಷಗಳಲ್ಲಿ ಬೊಗಳೆ ಭಾಷಣ ಬಿಟ್ಟರೆ ಬಿಜೆಪಿಗರು ಬೇರೇನನ್ನೂ ಮಾಡಿಲ್ಲ. ಧರ್ಮ, ಜಾತಿ, ಭಾಷೆ ಎನ್ನುವ ಬಿಜೆಪಿ ಬೇಕಾ, ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಕಾಂಗ್ರೆಸ್ ಬೇಕಾ ಎಂಬುದನ್ನ ಮತದಾರರು ನಿರ್ಧರಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಕೆಳಗಿನೂರು ಒಕ್ಕಲಿಗರ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಂಕಿ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಸಂವಿಧಾನ ಸಾರ್ವಜನಿಕ ಕ್ಷೇತ್ರದಲ್ಲಿ ಪವಿತ್ರ ಗ್ರಂಥ. ಅಂಥ ಸಂವಿಧಾನ ಬದಲಾವಣೆ ಮಾಡಲು ಹೊರಟ ಅನಂತಕುಮಾರ್ ಹೆಗಡೆಯವರೇ ಬದಲಾವಣೆಯಾದರು.
ಬಡವರಿಗೆ ಹಾಕೋಕೆ ಬಟ್ಟೆ ಇರಲ್ಲ. ಆದರೆ ಮಂಗಳೂರಿಗೆ ಆಗಮಿಸುತ್ತಿರುವ ನರೇಂದ್ರ ಮೋದಿಯವರು ಯಾವ ಫ್ಯಾನ್ಸಿ ಡ್ರೆಸ್ ಹಾಕೊಂಡು ಬರುತ್ತಾರೋ ಗೊತ್ತಿಲ್ಲ. ಅವರು ಫಿಲ್ಮಿ ಡೈಲಾಗ್‌ಗೇನು ಕಡಿಮೆ ಇಲ್ಲ. ಅವರ ಅಮೃತಕಾಲ ಸಂಪೂರ್ಣ ಬರ್ಬಾದ್ ಆಗಿದೆ. ಅತ್ಯಾಚಾರ ಸಂತ್ರಸ್ತರಿಗೂ ಮಾಲೆ ಹಾಕಿ ಸಿಹಿ ನೀಡಿ ಸಂಭ್ರಮಿಸುವವರು ಬಿಜೆಪಿಗರು. ಉತ್ತರಪ್ರದೇಶದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಹೆಚ್ಚಾಗಿ ಭಾಗಿಯಾಗುವವರೇ ಬಿಜೆಪಿಗರು. ಕೋವಿಡ್‌ನಲ್ಲಿ 40 ಲಕ್ಷ ಜನ ಸತ್ತರೂ ಮನೆಯಿಂದ ಹೊರಬಾರದ ನರೇಂದ್ರ ಮೋದಿ, ನವಿಲಿಗೆ ಊಟ ತಿನ್ನಿಸುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

ತಾಯಿಯ ಹೊಟ್ಟೆಯಿಂದಲೇ ಹಿಂದುತ್ವ ಕಲಿತಿದ್ದೇವೆ.

ಉಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಸಭೆಗಳಲ್ಲಿ ಮಾತನಾಡಿ, ಬಿಜೆಪಿಗರು ಹಿಂದುತ್ವದ ಜಪ ಮಾಡುತ್ತಿದ್ದಾರೆ. ನಾವು ತಾಯಿಯ ಹೊಟ್ಟೆಯಿಂದಲೇ ಹಿಂದುತ್ವ ಕಲಿತಿದ್ದೇವೆ. 30 ವರ್ಷಗಳಿಂದ ಜಿಲ್ಲೆಯ ಜನಕ್ಕೆ ಒಂದೇ ಒಂದು ಯೋಜನೆ ನೀಡದೆ ಬಹುದೊಡ್ಡ ಮೋಸ ಮಾಡಲಾಗಿದೆ. ಈ 30 ವರ್ಷಗಳ ವನವಾಸ ಕೊನೆಗೊಳ್ಳಬೇಕೆಂದರೆ ಕಾಂಗ್ರೆಸ್ ಕಾರ್ಯಕರ್ತರು ಒಂದಾಗಬೇಕಿದೆ. ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ನನಗೂ ಅರಿವಿದೆ. ಬಂದರು, ನೌಕಾನೆಲೆ, ಕೈಗಾದಂಥ ಬೃಹತ್ ಯೋಜನೆಗಳಲ್ಲಿ ಸ್ಥಳೀಯ ಯುವಜನರಿಗೆ ಉದ್ಯೋಗ ಸಿಗಬೇಕಿದೆ. ಬಿಜೆಪಿಗರಿಗೆ ಪಾಠ ಕಲಿಸಲು ಈ ಚುನಾವಣೆಯೊಂದೇ ಅವಕಾಶ ಎಂದರು.
ಇದು ಬಿಜೆಪಿ- ಕಾಂಗ್ರೆಸ್ ಚುನಾವಣೆಯಲ್ಲ, ನ್ಯಾಯ- ಅನ್ಯಾಯದ ಚುನಾವಣೆ. ಬಿಜೆಪಿ- ಜೆಡಿಎಸ್ ನಾಯಕರಿಗೆ ಸಂಸತ್ ನಲ್ಲಿ ಕಿವಿ ಚುಚ್ಚುವ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅರಣ್ಯ ಅತಿಕ್ರಮಣದಾರರಿಗೆ ಪರಿಹಾರ, ವಾರ್ಷಿಕ ಒಂದು ಲಕ್ಷ ಮಹಿಳೆಯರಿಗೆ ಸಹಾಯಧನ, ನರೇಗಾ ಕಾರ್ಮಿಕರ ದಿನಗೂಲಿ 400ಕ್ಕೆ ಹೆಚ್ಚಳ, ಕಿಸಾನ್ ನ್ಯಾಯ, ಯುವ ನ್ಯಾಯ ತರಲಿದ್ದೇವೆ. ಅಭ್ಯುದಯ- ಏಳ್ಗೆಗೆ ಕಾಂಗ್ರೆಸ್‌ಗೆ ಬೆಂಬಲಿಸಬೇಕು. ನನಗೋಸ್ಕರ ಅಲ್ಲ, ಕಾಂಗ್ರೆಸ್‌ಗಾಗಿಯೂ ಅಲ್ಲ, ನಿಮ್ಮ ಒಳ್ಳೆಯದಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ ಎಂದರು.

ಕುಮಾರಸ್ವಾಮಿಯವರು, ಕಾಂಗ್ರೆಸ್ ಗ್ಯಾರಂಟಿ ಮೂಲಕ ಹೆಣ್ಣುಮಕ್ಕಳನ್ನ ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎನ್ನುತ್ತಾರೆ. ಅವರು ಸ್ಪಷ್ಟಪಡಿಸಬೇಕು, ನಾವು ಹೇಗೆ ತಪ್ಪು ದಾರಿ ತೋರಿಸುತ್ತಿದ್ದೇವೆಂದು. ಹೆಣ್ಣುಮಕ್ಕಳನ್ನ ಸಬಲೀಕರಣಗೊಳಿಸಿದರೆ ಬಿಜೆಪಿ- ಜೆಡಿಎಸ್‌ನವರು ಯಾಕೆ ಬೇಸರವಾಗುತ್ತೆ?ಡಾ.ಅಂಜಲಿ ನಿಂಬಾಳ್ಕರ್, ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net