ಬೋರ್ಡ್ ಆಫ್ ಟ್ರೇಡ್​ಗೆ ಡಾ.ಆನಂದ ಸಂಕೇಶ್ವರ ನೇಮಕ

AS
Published on

ನವದೆಹಲಿ: ವಿಆರ್​ಎಲ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಸೇರಿದಂತೆ ಬೃಹತ್ ಮತ್ತು ಸಣ್ಣ ಉದ್ಯಮಗಳು ಹಾಗೂ ವಿವಿಧ ಕ್ಷೇತ್ರಗಳ ಆಯ್ದ 29 ಸದಸ್ಯರನ್ನು ಕೇಂದ್ರ ವಾಣಿಜ್ಯ ಮತ್ತು ಉದ್ಯೋಗ ಇಲಾಖೆಯ ಬೋರ್ಡ್ ಆಫ್ ಟ್ರೇಡ್​ಗೆ (ವ್ಯಾಪಾರ ಮಂಡಳಿ) ನಾಮನಿರ್ದೇಶನ ಮಾಡಲಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ.

ದೇಶದ ವಿದೇಶಿ ವ್ಯಾಪಾರವನ್ನು ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ಈ ಉನ್ನತ ಮಂಡಳಿಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಅವರು ಅಧ್ಯಕ್ಷರಾಗಿದ್ದಾರೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಗೋಪಿನಾಥನ್, ಕೆಕೆಆರ್ ಇಂಡಿಯಾ ಸಂಸ್ಥೆ ಅಧ್ಯಕ್ಷ ಸಂಜಯ್ ನಯ್ಯರ್, ಮಹಾರಾಷ್ಟ್ರ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಾಶಾ ಪಟೇಲ್, ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಪಂಕಜ್ ಮಹೀಂದ್ರೂ, ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, ಲಘು ಉದ್ಯೋಗ ಭಾರತಿ ಕಾರ್ಯಕಾರಿ ಸದಸ್ಯ ಓಂ ಪ್ರಕಾಶ್ ಮಿತ್ತಲ್, ಜಿಸಿಎಂಎಂಎಫ್ (ಅಮುಲ್) ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್. ಸೋಧಿ ಸೇರಿ ಹಲವರನ್ನು ಮಂಡಳಿಗೆ ನಾಮನಿರ್ದೇಶನ ಮಾಡಲಾಗಿದೆ.

ಆಮದು-ರಫ್ತು ಉತ್ತೇಜಿಸುವ ಸಲುವಾಗಿ ಸಂಬಂಧಪಟ್ಟವರೊಂದಿಗೆ ನಡೆಸುವ ಸಮಾಲೋಚನಾ ಪ್ರಕ್ರಿಯೆಯಲ್ಲಿ ಸುಸಂಬದ್ಧತೆ ತರಲು 2019ರಲ್ಲಿ ಕೌನ್ಸಿಲ್ ಆಫ್ ಟ್ರೇಡ್ ಡೆವಲಪ್​ವೆುಂಟ್ ಮತ್ತು ಪ್ರಮೋಷನ್ ಸಂಸ್ಥೆಯನ್ನು ಬೋರ್ಡ್ ಆಫ್ ಟ್ರೇಡ್​ನೊಂದಿಗೆ ವಿಲೀನಗೊಳಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net