

ಮುಳಬಾಗಿಲು: ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅನುಭವಿಸಿದ ಅಸ್ಪಶ್ಯತೆ, ನೋವು, ಸಂಕಟವೇ ಅವರ ಸಾಧನೆಗೆ ದಾರಿದೀಪವಾಗಿ ಬಳಸಿಕೊಂಡು ವಿದ್ಯಾವಂತರಾಗಿ, ಶೋಷಿತ ಸಮುದಾಯದ ಆಶಾಕಿರಣವಾಗಿ ಪ್ರಜ್ವಲಿಸುತ್ತಿದ್ದಾರೆ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ಹೇಳಿದರು.
ನಗರದ ನೇತಾಜಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಸಂವಿಧಾನ ನೀಡಿದ ಪರಿಣಾಮ ಶೋಷಿತ ದಲಿತ ಸಮುದಾಯದ ಹಲವು ಜನರು ಓದಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸ್ಥಾನಮಾನ ಪಡೆಯಲು ಸಾಧ್ಯವಾಗಿದೆ. ಬಾಲ್ಯದಲ್ಲಿ ನಾನು ಸಹ ಇಂತಹ ಹಲವು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದ್ದೇನೆ. ಆದರೆ ಇಂದು ಉದ್ಯಮಿಯಾಗಿ ಸಾವಿರಾರು ಜನಕ್ಕೆ ಉದ್ಯೋಗ ನೀಡಿದ್ದೇನೆ. ಶಾಸಕನೂ ಆಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅಂಬೇಡ್ಕರ್ ನೀಡಿರುವ ಮೀಸಲಾತಿಯ ಪ್ರಮುಖ ಕಾರಣವಾಗಿದೆ ಎಂದರು.
ನಗರದ ಬಜಾರ್ ರಸ್ತೆಗೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರು ನಾಮಕರಣದ ಜತೆಗೆ ನಾಮಫಲಕವನ್ನು ಅಳವಡಿಸಿ ಇಂದು ಲೋಕಾರ್ಪಣೆ ಮಾಡವ ಮೂಲಕ ಹಲವು ವರ್ಷಗಳ ಬೇಡಿಕೆ ಈಗ ಈಡೇರಿಸಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ವಿ.ಗೀತಾ ಮಾತನಾಡಿ, ಅಂಬೇಡ್ಕರ್ ಅವರು ದೀನದಲಿತರು, ಶೋಷಿತರು, ಮಹಿಳೆಯರಿಗೆ ಧ್ವನಿ ನೀಡಿದ ಮಹಾನ್ ಶಕ್ತ್ತಿಯಾಗಿದ್ದಾರೆ. ಅವರು ಭಾರತಕ್ಕೆ ಮಾತ್ರ ಸೀಮಿತವಲ್ಲ, ಅವರೊಬ್ಬ ವಿಶ್ವ ನಾಯಕ. ಇಂದು ಅವರ ಜಯಂತಿಯನ್ನು 143 ದೇಶಗಳಲ್ಲಿ ಆಚರಣೆ ಮಾಡಲಾಗುತ್ತಿದೆ. ವಿಶ್ವದ ವಿದ್ವಾಂಸರಲ್ಲಿ ಅಂಬೇಡ್ಕರ್ ಅವರೂ ಮುಂಚೂಣಿ ನಾಯಕರಾಗಿದ್ದಾರೆ. ಉನ್ನತ ಶಿಕ್ಷಣದಲ್ಲಿ 33 ಡಿಗ್ರಿ ಪಡೆದ ಏಕೈಕ ಸಾಧಕರಾಗಿದ್ದಾರೆ. ಅವರ ಸಾಧನೆ, ಜೀವನ ಚರಿತ್ರೆ ತಿಳಿದುಕೊಂಡು ಮುನ್ನಡೆದರೆ ಸ್ವಾವಲಂಬಿ ಯಾವುದರ ಜತೆಗೆ ನಾವೊಬ್ಬ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ ಎಂದರು.
ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಎಪಿಪಿ ಆರ್.ನಾಗರಾಜ್ ಅವರು ಅಂಬೇಡ್ಕರ್ ಜೀವನ ಚರಿತ್ರೆ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಮತ್ತು ಸಂವಿಧಾನ ಪೀಠಿಕೆಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಕೃಷಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ದಲಿತ ಸಾಧಕರನ್ನು ಸನ್ಮಾನಿಸಲಾಯಿತು.
ನಗರಸಭೆ ಸದಸ್ಯರಾದ ಡಿ.ಸೋಮಣ್ಣ, ಟಿ.ಮುನಿರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಿ.ವಿ. ಭವೀನ್ ಕುಮಾರ್, ಬಿಇಒ ಕೆ.ಎನ್. ರಾಮಚಂದ್ರಪ್ಪ, ಶಿಕ್ಷಣ ಸಂಯೋಜಕ ಪಿ.ಸೋಮೇಶ್, ದೈಹಿಕ ಶಿಕ್ಷಣಾಧಿಕಾರಿ ರಹೀಂ ಶರೀಫ್, ಶಾರದಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ. ನಾರಾಯಣಸ್ವಾಮಿ, ದಲಿತ ಮುಖಂಡರಾದ ಕಾರ್ ವಿ. ಶ್ರೀನಿವಾಸ್, ಸಂಗಸಂದ್ರ ವಿಜಯಕುಮಾರ್, ಮೆಕಾನಿಕ್ ಶ್ರೀನಿವಾಸ್, ಕಿಲುಹೊಳಲಿ ಸತೀಶ್, ಜಮ್ಮನಹಳ್ಳಿ ಕೃಷ್ಣ್ಣಪ್ಪ, ಬೈರಕೂರು ರಾಮಾಂಜಿ, ಅಂಬರೀಶ್, ಗ್ಯಾಸ್ ರಘು ಇದ್ದರು.
75 ಲಕ್ಷ ರೂ.ವೆಚ್ಚದಲ್ಲಿ ಮೇಲ್ಛಾವಣಿ
ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 4 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿಮಾರ್ಣಕ್ಕೆ, ಮತ್ತು ಅಂಬೇಡ್ಕರ್ ಪ್ರತಿಮೆ ಇರುವ ಸ್ಥಳದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಗೋಪುರದ ಮಾದರಿ ಮೇಲ್ಛಾವಣಿ ನಿಮಾರ್ಣ ಮಾಡಲಾಗುವುದು. ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರ ಮೂಲಕವೇ ಭೂಮಿಪೂಜೆ ನೆರವೇರಿಸಲಾಗುವುದು. ನಿವೇಶನ ರಹಿತ ಎಸ್ಸಿ&ಎಸ್ಟಿ ಸಮುದಾಯದವರಿಗೆ ನಿವೇಶನ ಜತೆಗೆ ಮನೆಯನ್ನು ಸರ್ಕಾರದಿಂದ ನೀಡಲಾಗುವುದು ಎಂದು ಶಾಸಕ ಸಮೃದ್ಧಿ ಮಂಜುನಾಥ್ ತಿಳಿಸಿದರು.
ನಗರ ಅಲಂಕಾರ
ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಗೆ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಿದ್ದು, ವಿವಿಧ ಕ್ಷೇತ್ರಗಳ ಗಣ್ಯರಿಂದ ಹೂ ಮಾಲೆ ಹಾಕಿ ಗೌರವ ಸಲ್ಲಿಸಲಾಯಿತು.