

ಗಂಗಾವತಿ: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಪುತ್ಥಳಿ ನಿರ್ಮಿಸುವಂತೆ ಒತ್ತಾಯಿಸಿ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾನ ಹೋರಾಟ ಸಮಿತಿ ಸದಸ್ಯರು ಶುಕ್ರವಾರ ನಗರಸಭೆ ಪರಿಸರ ಇಂಜಿನಿಯರ್ ಚೇತನ್‌ಗೆ ಮನವಿ ಸಲ್ಲಿಸಿದರು.
ಸಮಿತಿ ಸದಸ್ಯ ಶಿವಪ್ಪ ಮಾದಿಗ ಮಾತನಾಡಿ, ಹಲವು ವರ್ಷಗಳ ಹೋರಾಟದ ಲವಾಗಿ ನಗರದ ಕೋರ್ಟ್ ಮುಂದೆ ಡಾ.ಅಂಬೇಡ್ಕರ್ ವೃತ್ತ ನಿರ್ಮಿಸಿದ್ದು, ಆದರೆ, ಈವರೆಗೆ ಪುತ್ಥಳಿ ನಿರ್ಮಿಸಿಲ್ಲ. 2008-09ನೇ ಸಾಲಿನಲ್ಲಿ ಪುತ್ಥಳಿ ನಿರ್ಮಾಣಕ್ಕಾಗಿ ವಿಶೇಷ ಅನುದಾನ ಕಾಯ್ದಿರಿಸಿದ್ದು, ಬಳಕೆಯಾಗುತ್ತಿಲ್ಲ. ನಗರಸಭೆ, ಶಾಸಕ, ಸಂಸದರ ನಿಧಿಯಿಂದ ತಲಾ 10 ಲಕ್ಷ ರೂ. ಬಳಸಿಕೊಳ್ಳಲು ಅವಕಾಶವಿದ್ದು, ಸಮಾಜ ಕಲ್ಯಾಣ ಇಲಾಖೆ ಅನುದಾನವೂ ಇದೆ. ಡಾ.ಅಂಬೇಡ್ಕರ್ ಜಯಂತಿ ಒಳಗಾಗಿ ಪುತ್ಥಳಿ ನಿರ್ಮಾಣಕ್ಕಾಗಿ ನಗರಾಡಳಿತ ಕ್ರಮ ಕೈಗೊಳ್ಳಬೇಕು. ವೃತ್ತಕ್ಕೆ ರಕ್ಷಣಾ ಗ್ರಿಲ್ ಸೇರಿ ಇತರ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಸದಸ್ಯರಾದ ಹುಸೇನಪ್ಪ ಸ್ವಾಮಿ ಮಾದಿಗ, ಶಿವಪ್ಪ ವಿನೋಭನಗರ, ಆದಿಲ್‌ಪಾಷಾ, ಹನುಮಂತ ಮುಳೆ, ಸಿ.ಕೆ.ಮರಿಸ್ವಾಮಿ ಬರಗೂರು ಇತರರಿದ್ದರು.