

ಮಂಗಳೂರು: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಸದಾನಂದ ಶೆಟ್ಟಿ ಅವರಿಗೆ ಆ.26ರಂದು ಸಂಜೆ 4ಕ್ಕೆ ಸಾರ್ವಜನಿಕ ಅಭಿನಂದನೆ ಇಲ್ಲಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಅಭಿನಂದನಾ ಭಾಷಣ ಮಾಡಲಿದ್ದು, ಮಂಗಳೂರು ಸಂಸದರು ಅಧ್ಯಕ್ಷತೆ ವಹಿಸುವರು. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಮೇಯರ್ ಜಯಾನಂದ ಅಂಚನ್, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ನಿಟ್ಟೆ ವಿವಿ ಕುಲಾಧಿಪತಿ ಡಾ.ಎನ್.ವಿನಯ ಹೆಗ್ಡೆ, ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ, ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬೈ ಉದ್ಯಮಿ ಪಾದೆ ಅಜಿತ್ ರೈ, ಸಂಗೀತ ನಿರ್ದೇಶಕ ಗುರುಕಿರಣ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅಭಿನಂದನಾ ಸಮಿತಿ ಗೌರವಾಧ್ಯಕ್ಷ, ಎಂಆರ್‌ಜಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಕೆ.ಪ್ರಕಾಶ್ ಶೆಟ್ಟಿ ಉಪಸ್ಥಿತರಿರುವರು. ಮಧ್ಯಾಹ್ನ 3ಕ್ಕೆ ಪ್ರಸಿದ್ಧ ಗಾಯಕರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ಈಶ್ವರ್ ಕಟೀಲ್, ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಉಪಾಧ್ಯಕ್ಷರಾದ ಎನ್.ಜೆ.ನಾಗೇಶ್ ಎ.ಉಮೇಶ್ ಗಟ್ಟಿ, ಸಂಚಾಲಕರಾದ ಲೀಲಾಕ್ಷ ಕರ್ಕೇರ, ಪಿ.ಬಿ.ಹರೀಶ್ ರೈ, ಜಗನ್ನಾಥ ಶೆಟ್ಟಿ ಬಾಳ, ಪ್ರಕಾಶ್ ಕಾರಂತ್, ಡಿ.ಎಂ.ಅಸ್ಲಂ ಸುದ್ದಿಗೋಷ್ಠಿಯಲ್ಲಿದ್ದರು.
--------------------
ಸಮಿತಿ ಉಪಾಧ್ಯಕ್ಷ ಸತೀಶ್ ಕುಮಾರ್ ಕುದ್ರೋಳಿ ಮಾತನಾಡಿ, ಡಾ.ಎ.ಸದಾನಂದ ಶೆಟ್ಟಿಯವರು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ. ಮಂಗಳೂರಿನಲ್ಲಿ 1995ರಲ್ಲಿ ಏಷ್ಯನ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್ ಡಾ.ಸದಾನಂದ ಶೆಟ್ಟಿ ಮುಂದಾಳತ್ವದಲ್ಲಿ ನಡೆದಿತ್ತು. ಪ್ರತಿ 10 ವರ್ಷಕ್ಕೊಮ್ಮೆ ಅವರ ನೇತೃತ್ವದಲ್ಲೇ ರಾಷ್ಟ್ರೀಯ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್ ಮಂಗಳೂರಿನಲ್ಲಿ ನಡೆಯುತ್ತಿದೆ ಎಂದು ಹೇಳಿದರು.