

ಹಳಿಯಾಳ: ಎರಡು ದಶಕಗಳಿಂದ ಉದ್ಯೋಗಾಧಾರಿತ ಕೌಶಲಭರಿತ ತರಬೇತಿ ನೀಡುವ ಮೂಲಕ ರಾಜ್ಯದಲ್ಲಿ ಮಾದರಿ ಕೈಗಾರಿಕಾ ತರಬೇತಿ ಸಂಸ್ಥೆ ಎನಿಸಿಕೊಂಡ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ಉತ್ಕೃಷ್ಟ ಕೌಶಲ ಸಂವರ್ಧನ ತರಬೇತಿಗಾಗಿ ಖ್ಯಾತ ವಾಹನ ಉತ್ಪಾದನ ಸಂಸ್ಥೆ ಟೊಯೋಟಾ ಕಿಲೋಸ್ಕರ್ ಮೋಟಾರ ಜತೆಗೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಹೊಸ ಮೈಲುಗಲ್ಲಿಗೆ ಸಾಕ್ಷಿಯಾಗಿದೆ ಎಂದು ಡಿಪಿಐಟಿಐ ಪ್ರಾಂಶುಪಾಲ ದಿನೇಶ ನಾಯ್ಕ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಡಿಪಿಐಟಿಐ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡುವ ಸಲುವಾಗಿ ಟೊಯೋಟಾ ಕಿಲೋ ಸ್ಕರ್ ಮೋಟರ್ಸ್ ಜತೆ ಎಂಎಂವಿ, ಆಟೋ ಮೋಟಿವ್ ಪೇಂಟ್ ರಿಪೇರ, ಆಟೋ ಮೊಟಿವ್ ಬಾಡಿ ರಿಪೇರ್ ವೃತ್ತಿಗಳೊಂದಿಗೆ ಒಡಂ ಬಡಿಕೆ ಮಾಡಿಕೊಂಡಿದ್ದು, ಇದಕ್ಕೆ ಫಿಟ್ಟರ್ ವೃತ್ತಿಯನ್ನು ಸೇರ್ಪಡೆಗೊಳಿಸುವ ಮೂಲಕ ಹೊಸ ಭಾಷ್ಯ ಬರೆದಿದೆ ಎಂದಿದ್ದಾರೆ. ಒಡಂಬಡಿಕೆ ಪ್ರಕ್ರಿಯೆ ಬೆಂಗಳೂರಿನ ಟೊಯೋಟಾ ತರಬೇತಿ ಕೇಂದ್ರದಲ್ಲಿ ಜರುಗಿದ್ದು ಟೊಯೋಟಾ ಡೆಪ್ಯೂಟಿ ಜನರಲ್ ಮ್ಯಾನೇಜರ್ ವೆಂಕಟೇಶ ಹಾಗೂ ನಾನು ಸಹಿ ಹಾಕುವುದರ ಮೂಲಕ ಒಡಂಬಡಿಕೆಯನ್ನು ವಿನಿಮಯ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ.