ಪಡಿತರದಾರರ ಹತ್ತಾರು ಸಮಸ್ಯೆ ಅನಾವರಣ

ಹನೂರಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಸಮಿತಿ ಅಧ್ಯಕ್ಷ ರಾಚಯ್ಯ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿತ್ತು. ಸಿದ್ದರಾಜು, ಉಮೇಶ್, ಸೋಮಶೇಖರ್, ವಿಶ್ವನಾಥ್, ಜಯಶೀಲ ಇತರರು ಇದ್ದರು.
ಹನೂರಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಸಮಿತಿ ಅಧ್ಯಕ್ಷ ರಾಚಯ್ಯ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿತ್ತು. ಸಿದ್ದರಾಜು, ಉಮೇಶ್, ಸೋಮಶೇಖರ್, ವಿಶ್ವನಾಥ್, ಜಯಶೀಲ ಇತರರು ಇದ್ದರು.
Published on

ಹನೂರು: ನ್ಯಾಯಬೆಲೆ ಅಂಗಡಿಗಳು ನಿಗದಿತ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಪಡಿತರ ತೂಕದಲ್ಲಿ ಮೋಸವಾಗುತ್ತಿದೆ. ಕೆಲವರು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಿದ್ದಾರೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸಮಸ್ಯೆಯಿಂದಾಗಿ ಕೆಲವರಿಗೆ ಗೃಹಲಕ್ಷ್ಮೀ ಹಣ ಬರುತ್ತಿಲ್ಲ. ವಿದ್ಯುತ್ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಲಾಗುತ್ತಿದೆ. ಗ್ರಾಮಗಳಲ್ಲಿ ಸರಿಯಾಗಿ ಬಸ್ ನಿಲ್ಲಿಸುತ್ತಿಲ್ಲ...

ಇದು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದ ಸಭಾಂಗಣದಲ್ಲಿ ಗುರುವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಚಯ್ಯ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಧ್ವನಿಸಿದ ಪ್ರಮುಖ ದೂರುಗಳು.

ಸಭೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆ ಅನುಷ್ಠಾನ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಈ ವೇಳೆ ಸಮಿತಿ ಅಧ್ಯಕ್ಷ ರಾಚಯ್ಯ ಮಾತನಾಡಿ, ನ್ಯಾಯ ಬೆಲೆ ಅಂಗಡಿಗಳು ಸರ್ಕಾರ ನಿಗದಿಪಡಿಸಿರುವ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಪಡಿತರವನ್ನು ಪಡೆಯಲು ಜನರು ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೆ ಪಡಿತರ ತೂಕದಲ್ಲಿ ಮೋಸವಾಗುತ್ತಿದೆ. ಕೆಲವರಿಂದ ಹಣ ವಸೂಲು ಮಾಡಲಾಗುತ್ತಿದೆ ಎಂಬ ಆರೋಪವಿದೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸುವಂತೆ ಆಹಾರ ಶಿರಸ್ತೇದಾರ್ ವಿಶ್ವನಾಥ್ ಅವರಿಗೆ ಸೂಚಿಸಿದರು.

ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಿರುವ ತಾಲೂಕಿನ 931 ಕುಟುಂಬಗಳಿಗೆ ಈ ಯೋಜನೆಯ ಸೌಲಭ್ಯ ದೊರಕಿಸಿಕೊಡಲು ಮುತುರ್ವಜಿ ವಹಿಸಬೇಕು. ಇಲ್ಲವೇ ಈ ಬಗ್ಗೆ ಆಯಾ ಗ್ರಾಪಂವಾರು ಪಟ್ಟಿ ನೀಡಿದರೆ ಸದಸ್ಯರು ಯೋಜನೆಯನ್ನು ಜನರಿಗೆ ತಲುಪಿಸಲು ಅಗತ್ಯ ಕ್ರಮ ವಹಿಸುವರು ಎಂದು ಸಮಿತಿ ಉಪಾಧ್ಯಕ್ಷ ಉದ್ದನೂರು ಸಿದ್ದರಾಜು ತಿಳಿಸಿದರು.

ಸಮಿತಿ ಸದಸ್ಯ ಮಹದೇವಯ್ಯ ಮಾತನಾಡಿ, ಗಿರಿಜನರ ಗ್ರಾಮ ಹಾವಿನಮೂಲೆಯ ಜನರು ಪಡಿತರವನ್ನು ಪಡೆದುಕೊಳ್ಳಬೇಕಾದರೆ ಉದ್ದಟ್ಟಿ ಗ್ರಾಮಕ್ಕೆ ಅರಣ್ಯದ ನಡುವೆ ನಡೆದು ಬರಬೇಕಿದ್ದು, ಕಾಡು ಪ್ರಾಣಿಗಳ ಭಯ ಆವರಿಸಿದೆ. ಜತೆಗೆ 35 ಕೆ.ಜಿ ಅಕ್ಕಿಯ ಬದಲು 30 ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಹಾಗಾಗಿ ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಬಾಕಿ ವಿದ್ಯುತ್ ಬಿಲ್‌ಗೆ ಒತ್ತಡ: ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಜಾರಿಗೊಳಿಸಿದ್ದು, ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ ಈ ಹಿಂದೆ ಇದ್ದ ಬಾಕಿ ವಿದ್ಯುತ್ ಬಿಲ್ ಪಾವತಿಸುವಂತೆ ಸಿಬ್ಬಂದಿ ಒತ್ತಡ ಹೇರುತ್ತಿದ್ದಾರೆ ಎಂಬ ದೂರಿದೆ. ಆದ್ದರಿಂದ ಈ ಬಗ್ಗೆ ಸಡಿಲೀಕರಣವಾಗಬೇಕು ಎಂದು ಸದಸ್ಯರು ಸೂಚಿಸಿದರು. ಸದಸ್ಯ ಸೋಮಶೇಖರ್ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣದಲ್ಲಿ ಆಗ್ಗಾಗ್ಗೆ ಅಪಘಾತ ಸಂಭವಿಸಿ ಸಾವು, ನೋವುಗಳು ಸಂಭವಿಸುತ್ತಿದೆ. ಆದ್ದರಿಂದ ಈ ಬಗ್ಗೆ ಕ್ರಮ ವಾಗಬೇಕು. ಶಾಲೆ, ಆಸ್ಪತ್ರೆ ಹಾಗೂ ಗ್ರಾಮಗಳಲ್ಲಿ ಬಸ್ ನಿಲುಗಡೆಯಾಗಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾದವರನ್ನು ಗುರುತಿಸಿ ಯೋಜನೆಯ ಸೌಲಭ್ಯ ತಲುಪಿಸಬೇಕು. ಯುವನಿಧಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾಗೊಳಿಸಬೇಕು ಎಂದು ಸಭೆಯಲ್ಲಿ ಒತ್ತಾಯ ಕೇಳಿ ಬಂತು. ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.

ಸಮರ್ಪಕ ಅನುಷ್ಠಾನಕ್ಕೆ ಕ್ರಮ: ಸಭೆಯಲ್ಲಿ ತಾಲೂಕು ಪಂಚಾಯಿತಿ ಇಒ ಉಮೇಶ್ ಮಾತನಾಡಿ, ಸರ್ಕಾರ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 5 ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಕೆಲವರು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಹನೂರು ಭಾಗವು ಹೆಚ್ಚು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ಈ ಬಗ್ಗೆ ಜನರಿಗೆ ಮಾಹಿತಿ ತಿಳಿಸುವುದರ ಮೂಲಕ ಪ್ರತಿಯೊಬ್ಬರಿಗೂ ಈ ಯೋಜನೆ ತಲುಪಬೇಕು. ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಸಮಿತಿ ರಚಿಸಲಾಗಿದ್ದು, ತಿಂಗಳಲ್ಲಿ 2 ಬಾರಿ ಸಭೆ ನಡೆಸಲು ಸೂಚಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬರು ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಬಸ್ ಡಿಪೋ ವ್ಯವಸ್ಥಾಪಕ ಶಂಕರ್, ಪ್ರಭಾರ ಸಿಡಿಪಿಒ ಜಯಶೀಲ, ಸೆಸ್ಕ್ ಜೆಇ ರಾಜು, ಸಮಿತಿ ಸದಸ್ಯರಾದ ಮಹದೇವಮ್ಮ, ಅರುಣ್‌ಕುಮಾರ್, ಸಿದ್ದಪ್ಪಾಜಿ, ಗೋವಿಂದ, ಸುರೇಶ್, ಬಸವರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net