

ಬೆಂಗಳೂರು: ಸ್ಯಾಂಡಲ್ವುಡ್ ನಟ, ನಿರ್ದೇಶಕ ಎಸ್.ನಾರಾಯಣ್ (S Narayan) ಕುಟುಂಬದಲ್ಲಿ ಬಿರುಗಾಳಿ ಎದ್ದಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವರದಕ್ಷಿಣೆ ಕಿರುಕುಳ ಆರೋಪ ಪ್ರಕರಣದಲ್ಲಿ (Dowry harassment case) ಖ್ಯಾತ ನಿರ್ದೇಶಕ A2 ಆಗಿದ್ದು, ಎಫ್‌ಐಆರ್ ದಾಖಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಸ್.ನಾರಾಯಣ್ ಅವರ ಎರಡನೇ ಮಗನ ಪತ್ನಿ ಪವಿತ್ರಾ ದೂರು ದಾಖಲಿಸಿದ್ದಾರೆ.
ಮದುವೆಯಲ್ಲಿ ವರದಕ್ಷಿಣೆ ಕೊಟ್ಟಿದ್ದರೂ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಹಲ್ಲೆ ನಡೆಸಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಎಸ್.ನಾರಾಯಣ್, ಪತ್ನಿ ಭಾಗ್ಯಲಕ್ಷ್ಮಿ, ಪತಿ ಪವನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಎಫ್ಐಆರ್ನಲ್ಲಿ ಉಲ್ಲೇಖದ ದೂರಿನ ಪ್ರಕಾರ, ಪವಿತ್ರ ಹಾಗೂ ಎಸ್.ನಾರಾಯಣ್ ಪುತ್ರ ಪವನ್ 2021ರಲ್ಲಿ ಮದುವೆ ಆಗಿದ್ದಾರೆ. ನನ್ನ ಪತಿ ಪವನ್ ಓದಿಲ್ಲ, ನಾನೇ ಎಲ್ಲಾ ಕೆಲಸ ಮಾಡಿ ಮನೆಯ ಸಂಸಾರ ಸಾಗಿಸುತ್ತಿದ್ದೆ. ಪವನ್ ‘ಕಲಾ ಸಾಮ್ರಾಟ್ ಟೀಂ ಅಕಾಡಮಿ’ ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಆರಂಭಿಸಲು ನಾನು ತಾಯಿಯ ಒಡವೆಗಳನ್ನ ಅಡವಿಟ್ಟು ಹಣ ಕೊಟ್ಟಿದ್ದೆ. ಕೊನೆಗೆ ಆ ಸಂಸ್ಥೆ ಲಾಸ್ ಆಗಿ ಮುಚ್ಚಲಾಯಿತು. ಅಲ್ಲಿ ಆಗಿರುವ ನಷ್ಟ ತುಂಬಿಸಿಕೊಳ್ಳಲು ನಾನು 10 ಲಕ್ಷ ರೂಪಾಯಿ ಸಾಲ ಮಾಡಿ ಪವನ್ಗೆ ನೀಡಿದ್ದೆ.
ಮದುವೆಯಲ್ಲಿ 1 ಲಕ್ಷ ರೂ. ಮೌಲ್ಯದ ಉಂಗುರ ಹಾಗೂ ಮದುವೆ ಖರ್ಚು ನೋಡಿಕೊಂಡಿದ್ದೆವು. ವರದಕ್ಷಿಣೆ ಕೊಟ್ರೂ ಹಲ್ಲೆ ನಡೆಸಿ ಹೆಚ್ಚಿನ ಹಣಕ್ಕೆ ಒತ್ತಾಯಿಸಿದ್ದಾರೆ. ಹೀಗಾಗಿ ಜಗಳ ಆಗಿ ನನ್ನನ್ನು ಮನೆಯಿಂದ ಆಚೆ ಹಾಕಿದ್ದರು. ನನ್ನ ಮಗನಿಗೆ ತೊಂದರೆಯಾದರೆ ಎಸ್.ನಾರಾಯಣ್, ಭಾಗ್ಯಲಕ್ಷ್ಮಿ ಹಾಗೂ ಪವನ್ ಕಾರಣ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.