

ಉಪ್ಪಿನಂಗಡಿ : ನಲವತ್ತು ಪವನ್ ಚಿನ್ನಾಭರಣ ವರದಕ್ಷಿಣೆಯಾಗಿ ತಂದೊಪ್ಪಿಸಬೇಕೆಂದು ಒತ್ತಾಯಿಸಿ ಪತಿ ಹಾಗೂ ಅತ್ತೆ, ಮಾವ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆಂದು ಆರೋಪಿಸಿ 25ರ ಹರೆಯದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಬೆನಪು ಉರ್ಲಡ್ಕ ನಿವಾಸಿ ಅಲ್ತಾಪ್ ಎಂಬುವನ ಪತ್ನಿ ಫಾತಿಮಾತ್ ಸೈನಾಜ್ ವರದಕ್ಷಿಣೆ ಹಿಂಸೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದ ಮಹಿಳೆ. 2021ರಲ್ಲಿ ವಿವಾಹವಾಗಿದ್ದು, ಕೇವಲ 30 ಪವನ್ ಚಿನ್ನಾಭರಣ ತಂದಿರುವುದಕ್ಕೆ ಆಕ್ಷೇಪಿಸಿ ಅಲ್ತಾಪ್, ಮಾವ ಮಹಮ್ಮದ್, ಅತ್ತೆ ಜಮೀಳಾ ನಿತ್ಯ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರೆಂದು ದೂರಿನಲ್ಲಿ ಹೇಳಲಾಗಿದೆ. ಉಳಿದ ಚಿನ್ನಾಭರಣ ತರಬೇಕೆಂದು ತಾಕೀತು ಮಾಡಿ, ಅ.3ರಂದು ಫಾತಿಮಾತ್ ಸೈನಾಜ್‌ಳ ಮೇಲೆ ಅತ್ತೆ, ಮಾವ ಹಲ್ಲೆ ನಡೆಸಿ, ಮನೆಯಿಂದ ಹೊರಗಟ್ಟಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಆಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.