

ಶನಿವಾರಸಂತೆ: ನಿಡ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆಯಿಂದ ಸುರಿದ ಭಾರಿ ಮಳೆಗೆ ವಿದ್ಯುತ್ ಕಂಬಗಳು, ಮರಗಳು ಉರುಳಿ ಬಿದ್ದಿವೆ.
ಮಂಗಳವಾರ ರಾತ್ರಿ ಸುರಿಯುತ್ತಿದ್ದ ಭಾರಿ ಮಳೆ, ಗಾಳಿಗೆ ನಿಡ್ತ ಸರ್ಕಾರಿ ಶಾಲೆ ಬಳಿಯ ಹಾರೆಹೊಸೂರು ರಸ್ತೆ ಬದಿಯಲ್ಲಿ ಭಾರಿ ಗಾತ್ರದ ಮರದ ಕೊಂಬೆ ವಿದ್ಯುತ್ ತಂತಿಯ ಮೇಲೆ ಮುರಿದು ಬಿದ್ದ ಪರಿಣಾಮ ವಿದ್ಯುತ್ ಕಂಬ ಸಹ ಮುರಿದು ಬಿದ್ದಿದೆ. ಇದರಿಂದ ನಿಡ್ತ ಗ್ರಾ.ಪಂ.ನಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಮಾಹಿತಿ ತಿಳಿದ ಸೆಸ್ಕ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬ, ಮರದ ಕೊಂಬೆಯನ್ನು ತೆರವುಗೊಳಿಸಿದರು.
ಬುಧವಾರ ಬೆಳಗ್ಗೆ ನಿಡ್ತ ವ್ಯಾಪ್ತಿಯಲ್ಲಿ ಧಾರಕಾರವಾಗಿ ಮಳೆಯಾಗಿದೆ. ನಿಡ್ತ ಸಮಿಪದ ಕಾರ್ಗೊಡು ಬಳಿ ಶನಿವಾರಸಂತೆ ರಸ್ತೆ ಬದಿಯಲ್ಲಿ ಭಾರಿ ಗಾತ್ರದ ಮರವೊಂದು ಬೀಳುವ ಸ್ಥಿತಿಯಲ್ಲಿತ್ತು. ಇದೇ ವೇಳೆಯಲ್ಲಿ ವಾಹನ ಸವಾರರು ಮರ ನೆಲಕ್ಕೆ ವಾಲುತ್ತಿರುವುದನ್ನು ಗಮನಿಸಿ ವಾಹನಗಳನ್ನು ಅಲ್ಲಿ ನಿಲ್ಲಿಸಿಕೊಂಡರು ಈ ಕುರಿತು ಸ್ಥಳೀಯರು ಗ್ರಾ.ಪಂ.ಗೆ ಮಾಹಿತಿ ನೀಡಿದ ಬಳಿಕ ಮಳೆ ವಿಪತ್ತು ಮುಂಜಾಗ್ರತಾ ಟಾಸ್ಕ್‌ಫೋರ್ಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಬೀಳುವ ಹಂತದಲ್ಲಿದ್ದ ಮರವನ್ನು ತೆರವುಗೊಳಿಸುವ ಮೂಲಕ ಅನಾಹುತ ತಪ್ಪಿಸಿದರು.