

ಅಥಣಿ: ಮುಂದಿನ ಹಂತದಲ್ಲಿ ಕೇಂದ್ರಿಯ ವಿದ್ಯಾಲಯ ನಿರ್ಮಾಣವಾಗಲಿದೆ. ಡಬಲ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಗಣೇಶ ಮಂದಿರದಿಂದ ಐನಾಪುರ-ತಂಗಡಿ ರಸ್ತೆಯ ಸುಮಾರು 2.6 ಕಿಮೀ ರಸ್ತೆಯ ಅಗಲೀಕರಣ, ಡಾಂಬರೀಕರಣ ಮತ್ತು ುಟ್‌ಪಾತ್ ಸುಮಾರು 9 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಸತ್ತಿ ಗ್ರಾಮದಿಂದ ಜಿರೋ ಪಾಯಿಂಟ್‌ವರೆಗೆ 2 ಕೋಟಿ ರೂ., ಬಡಚಿ-ಬುರ್ಲಟ್ಟಿ ರಸ್ತೆ ಮತ್ತು ಬಾಂದಾರ ನಿರ್ಮಾಣ ಒಟ್ಟು 6 ಕೋಟಿ ರೂ., ಸವದಿ-ದರ್ಗಾ-ಜನವಾಡ ರಸ್ತೆಗೆ 2ಕೋಟಿ ರೂ., ಅಥಣಿ-ಕೊಕಟನೂರ ರಸ್ತೆ ಅಗಲೀಕರಣಕ್ಕೆ ಸುಮಾರು 45ಕೋಟಿ ರೂ. ಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಮುಂಬರುವ ದಿನಗಳಲ್ಲಿ ಅಂದಾಜು 130 ಕೋಟಿ ರೂ. ವೆಚ್ಚದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಲಾಗುವುದು. ಕೊಕಟನೂರ, ಯಲ್ಲಡಗಿ, ಸತ್ತಿ ಹಾಗೂ ಮತ್ತಿತರ ಕಡೆಗಳಲ್ಲಿ ಸರ್ಕಾರಿ ಜಾಗದಲ್ಲಿ ಸೋಲಾರ್ ಪಾರ್ಕ್ 30 ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿಯೊಂದಿಗೆ ನಿರ್ಮಾಣ ಮಾಡಲಾಗುವುದು ಎಂದರು.
ಕಾಶ್ಮೀರದಲ್ಲಿ ನಡೆದ ಕೃತ್ಯ ಖಂಡನೀಯ: ಈಚೆಗೆ 26 ಜನ ಅಮಾಯಕರನ್ನು ಹತ್ಯೆಗೈದಿರುವ ಉಗ್ರರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪಕ್ಷಾತೀತ, ಜಾತ್ಯತೀತವಾಗಿ ಉಗ್ರರರನ್ನು ಸದೆ ಬಡೆಯಬೇಕು. ಕೇಂದ್ರ ಸರ್ಕಾರ ಮೊದಲು ಪಿಒಕೆಯನ್ನು ವಶಪಡಿಸಿಕೊಳ್ಳಬೇಕು. ದೇಶದಲ್ಲಿರುವ ಪಾಕಿಸ್ತಾನಿಯರ ವೀಸಾ ರದ್ದುಗೊಳಿಸಿ ಗಡಿಪಾರು ಮಾಡಿ, ಉಗ್ರಗಾಮಿಗಳಿಗೆ ತಕ್ಕ ಶಿಕ್ಷೆ ನೀಡಿ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದರು.
ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಅಧಿಕಾರಿಗಳಾದ ಜಯಾನಂದ ಹಿರೇಮಠ, ಮುರುಗೇಶ ಮಗದುಮ್ಮ, ವಿ.ಎ.ವಾಲಿ, ಗುತ್ತಿಗೆದಾರ ಗಿರೀಶ ಸಜ್ಜನ, ಎಸ್.ಆರ್.ಗುಳಪ್ಪನವರ, ಪುರಸಭಾ ಸದಸ್ಯರಾದ ರಾಜು ಗುಡೋಡಗಿ, ಸಂತೋಷ ಸಾವಡಕರ, ಮಲ್ಲು ಬುಟಾಳೆ, ಕಲ್ಮೇಶ ಮಡ್ಡಿ, ಮಲ್ಲು ಹುದ್ದಾರ, ನರಸು ಬಡಕಂಬಿ, ರಾಮನಗೌಡ ಪಾಟೀಲ, ಅಮರ ದುರ್ಗಣವರ, ಸಂತೋಷ ಲಠ್ಠೆ, ಸುರೇಶ ಚಿಕ್ಕಟ್ಟಿ,ಸಂದೀಪ ಸಂಗೊರಾಮ,ಅಜಿತ್ ಇನಾಮದಾರ ಸೇರಿದಂತೆ ಮತ್ತಿತರರು ಇದ್ದರು.