

ಬೆಳಗಾವಿ: ಅತಿವೃಷ್ಟಿ, ನೆರೆ ಹಾವಳಿಯಿಂದ ಜನರು ತತ್ತರಿಸಿದ್ದು, ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಿಲ್ಲ. ಕೇಂದ್ರದಿಂದಲೂ ನಯಾ ಪೈಸೆ ನೆರವು ಸಿಕ್ಕಿಲ್ಲ. ಡಬ್ಬಲ್ ಇಂಜಿನ್ ಸರ್ಕಾರದಿಂದ ಡಬ್ಬಲ್ ಅನ್ಯಾಯವಾಗಿದೆ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಸಾರ್ವಜನಿಕ ಮಹತ್ವದ ಜರೂರು ವಿಷಯದಡಿ ಮಂಗಳವಾರ ಚರ್ಚೆ ಮುಂದುವರಿಸಿದ ಅವರು, ಅತಿವೃಷ್ಟಿ ಹಾಗೂ ಪ್ರವಾಹ ತಂದಿತ್ತ ಕಷ್ಟ-ನಷ್ಟ, ಸರ್ಕಾರ ಸ್ಪಂದಿಸಿದ ರೀತಿಯ ಬಗ್ಗೆ ಅಂಕಿ-ಅಂಶಗಳ ಸಹಿತ ಎಳೆ ಎಳೆಯಾಗಿ ಬಿಚ್ಚಿಟ್ಟು, ‘ಡಬಲ್ ಇಂಜಿನ್ ಸರ್ಕಾರ ಡಬಲ್ ಧಖಾ’ ಎಂದು ತಿವಿದರು. ರಾಜ್ಯದ 25 ಲೋಕಸಭೆ ಸದಸ್ಯರು ಧ್ವನಿ ಎತ್ತಲಿಲ್ಲ. ರಾಜ್ಯ ಸರ್ಕಾರವೂ ಕೇಂದ್ರಕ್ಕೆ ಒತ್ತಡ ಹೇರದ ಪರಿಣಾಮ ನೊಂದವರಿಗೆ ಸಕಾಲಕ್ಕೆ ನೆರವು ನೀಡುವಲ್ಲಿ ವಿಫಲವಾಗಿದೆ. ಅದೇನು ಮಾಡುತ್ತೀರೋ ಗೊತ್ತಿಲ್ಲ, ಕೇಂದ್ರದಿಂದ ಅನುದಾನ ತರಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ. ತಕ್ಷಣವೇ ಬೆಳೆ ಹಾಗೂ ಮನೆ ಕಳೆದುಕೊಂಡವರಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು. ಖುಷ್ಕಿ, ನೀರಾವರಿ ಮತ್ತು ಬಹು ವಾರ್ಷಿಕ ಬೆಳೆಗಳಿಗೆ ನಿಗದಿಪಡಿಸಿದ ಹೆಕ್ಟೇರ್ವಾರು ಪರಿಹಾರ ಮೊತ್ತ ಮೂರು ಪಟ್ಟು ಹೆಚ್ಚಿಸಬೇಕು. 10 ಲಕ್ಷ ರೈತರಿಗೆ 700 ಕೋಟಿ ರೂ. ಬೆಳೆ ಪರಿಹಾರ ವಿತರಿಸಿದ್ದೇವೆ ಎಂದು ಸರ್ಕಾರ ಹೇಳಿದ್ದು, ಉಳಿದಿರುವ 10 ಲಕ್ಷ ರೈತರಿಗೂ ನೆರವು ನೀಡಬೇಕು. ಮನೆ ಕಳೆದುಕೊಂಡವರ ನೆರವಿಗೂ ತುರ್ತಾಗಿ ಧಾವಿಸಬೇಕು. 2019ರಲ್ಲಿ ಬಿದ್ದ ಮನೆಗಳಿಗೂ ಪರಿಹಾರ ಸಿಗದ ಸಂತ್ರಸ್ತರು ಆತ್ಮಹತ್ಯೆ ಬೆದರಿಕೆ ಹಾಕಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಡಬ್ಬಲ್ ಮೋಸ: ಕೇಂದ್ರದಲ್ಲೂ ನಾವೇ, ರಾಜ್ಯದಲ್ಲೂ ನಾವೇ ಅಧಿಕಾರಕ್ಕೆ ಬಂದರೆ ಸ್ವರ್ಗವೇ ಸೃಷ್ಟಿಸುತ್ತೇವೆ ಎಂದು ಹೇಳಿಕೊಂಡಿದ್ದರು. ಆದರೆ ವಿವಿಧ ತೆರಿಗೆಗಳ ರೂಪದಲ್ಲಿ ಕೇಂದ್ರದ ಬೊಕ್ಕಸಕ್ಕೆ 3 ಲಕ್ಷ ಕೋಟಿ ರೂ. ರಾಜ್ಯದಿಂದ ಜಮೆಯಾಗಿದ್ದರೆ, ಕೇಂದ್ರದ ಪಾಲು ಮತ್ತು ಅನುದಾನ ಸೇರಿ 55,000 ಕೋಟಿ ರೂ. ನೀಡಿದೆ. ಅಲ್ಲದೆ, ಕೇಂದ್ರದ ತೆರಿಗೆ ಹಂಚಿಕೆ ನಿಗದಿ ಪ್ರಮಾಣದಲ್ಲೂ ಕಳೆದೆರಡು ವರ್ಷಗಳಲ್ಲಿ 18,000 ಕೋಟಿ ರೂ. ಖೋತಾ ಆಗಿದೆ. ಹಾಗೆಯೇ 15ನೇ ಹಣಕಾಸು ಆಯೋಗ ಶಿಫಾರಸಿನಂತೆ ಮಧ್ಯಂತರ ಪರಿಹಾರವಾಗಿ 5,495 ಕೋಟಿ ರೂ. ಕೊಡಲಿಲ್ಲ, ರಾಜ್ಯ ಸರ್ಕಾರಕ್ಕೂ ಕೇಳುವ ಧಮ್ ಇಲ್ಲ. ಕೇಂದ್ರ ಪುರಸ್ಕೃತ ಯೋಜನೆಯಡಿ ಕೇಂದ್ರದ ಪಾಲು ಶೇ.75ರಿಂದ 45ಕ್ಕೆ ಕುಸಿದಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ತಾಂಡಗಳನ್ನು ಕಂದಾಯ ಗ್ರಾಮ ಮಾಡಿ: ತಾಂಡಗಳಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿ ಜನರಿಲ್ಲ. ಅಂಗನವಾಡಿ, ವಸತಿ ಶಾಲೆಗಳಿಲ್ಲ. ಇದರಿಂದ ಮಕ್ಕಳನ್ನು ಕೆಲಸಕ್ಕೆ ಕರೆದೊಯ್ಯುವ ಅನಿರ್ವಾಯತೆ ಎದುರಾಗಿದೆ. ಈ ಹಿಂದೆ ಕೆಲಸಕ್ಕೆ ಕರೆದುಕೊಂಡು ಹೋಗಿದ್ದ ಮಗುವಿನ ಮೇಲೆ ಟ್ರಾ್ಯಕ್ಟರ್ ಹರಿದು ಸಾವನಪ್ಪಿದೆ. ಇದಕ್ಕೆ ಪರಿಹಾರ ನೀಡಿಲ್ಲವೆಂದು ಕಾಂಗ್ರೆಸ್ನ ಪ್ರಕಾಶ್ ರಾಥೋಡ್ ಧ್ವನಿ ಎತ್ತಿದ್ದರು. ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್, ತಾಂಡಗಳನ್ನು ಕಂದಾಯ ಗ್ರಾಮವಾಗಿ ಘೋಷಣೆ ಮಾಡಿ ಅಲ್ಲಿ ನೈಸರ್ಗಿಕವಾಗಿ ನೀಡಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತಾಂಡಗಳನ್ನು ಕಂದಾಯ ಗ್ರಾಮವಾಗಿ ಘೋಷಿಸದ ಹೊರತು, ಸೌಲಭ್ಯಗಳನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದರು.
ಹಾಜರಾಗಲೇಬೇಕು: ಚಳಿಗಾಲ ಅಧಿವೇಶನವನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಬೇಕು ಎಂದು ಸ್ಪೀಕರ್ ಹೇಳಿದ್ದಾರೆ. ಕಲಾಪದ 2ನೇ ದಿನವಾದ ಮಂಗಳವಾರವೂ ವಿಧಾನಸಭೆಯಲ್ಲಿ ಸಚಿವರು, ಶಾಸಕರ ಸಂಖ್ಯೆ ಕಡಿಮೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಮಾಧ್ಯಮಗಳು ಕೂಡ ಶಾಸಕರ ಸಂಖ್ಯೆ ಕಡಿಮೆ ಇರುವುದನ್ನು ಎತ್ತಿ ತೋರಿಸಿವೆ. ಮಂಗಳವಾರ ಮೂರು ಪಕ್ಷಗಳು ಸೇರಿ 119 ಶಾಸಕರು ಹಾಜರಾಗಿದ್ದು, ಇದು ತುಂಬಾ ಕಡಿಮೆಯಾಗಿದೆ. ಅತ್ಯಂತ ಅನಿವಾರ್ಯ ಪ್ರಸಂಗಗಳನ್ನು ಹೊರತುಪಡಿಸಿ ಅಧಿವೇಶನದಲ್ಲಿ ತಾವು ಪಾಲ್ಗೊಳ್ಳಬೇಕು. ವರ್ಷದ 40-50 ದಿನ ನಡೆಯುವ ಅಧಿವೇಶನಗಳಲ್ಲಿ ಚರ್ಚೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಬೇಕು ಎಂದು ಸಭಾಧ್ಯಕ್ಷರು ಮನವಿ ಮಾಡಿದರು. ಶಾಸಕರ ಹಾಜರಾತಿ ಕಡಿಮೆ ಬಗ್ಗೆ ‘ವಿಜಯವಾಣಿ’ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.
ಅಂಕಿ-ಅಂಶಗಳ ಜುಗಲ್ಬಂದಿ: ಬರ, ನೆರೆ, ಅತಿವೃಷ್ಟಿ ಪರಿಹಾರ ಕೆಲಸಗಳಿಗಾಗಿ ಕೇಂದ್ರದಿಂದ ರಾಜ್ಯಕ್ಕೆ ಹರಿದು ಬಂದ ನೆರವಿನ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಆರ್.ಅಶೋಕ್ ಮಧ್ಯೆ ಅಂಕಿ-ಅಂಶಗಳ ಜುಗಲ್ಬಂದಿ ನಡೆಯಿತು. ಸಿದ್ದರಾಮಯ್ಯ ನೀಡಿದ ವಿವರ (ಕೋಟಿ ರೂ.ಗಳಲ್ಲಿ): 2008-09: 74, 2009-10: 1,594.36, 10-11: ಏನೂ ಇಲ್ಲ, 11-12: 352.58, 13-14: 328, 14-15: 188, 15-16: 188, 16-17: 2,598, 18-19: 2,504, 19-20: 1,562, 20-21: 1,318 ಹಾಗೂ 2021-22ಕ್ಕೆ ಈವರೆಗೆ ನಯಾ ಪೈಸೆ ಬಂದಿಲ್ಲ.
ಆರ್.ಅಶೋಕ್ ಪ್ರತ್ಯುತ್ತರ (ಕೋಟಿ ರೂ.ಗಳಲ್ಲಿ): ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ನ ಆರು ವರ್ಷಗಳ ಆಡಳಿತಾವಧಿಯಲ್ಲಿ ಎಸ್ಡಿಆರ್ಎಫ್ ಅಡಿ 726, ಎನ್ಡಿಆರ್ಎಫ್ ಅಡಿ 2,916, ಎನ್ಡಿಆರ್ಎಫ್ ಅಡಿ 2,069 ಕೋಟಿ ರೂ. ಲಭ್ಯವಾಗಿದ್ದರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಆರು ವರ್ಷಗಳ ಆಡಳಿತಾವಧಿಯಲ್ಲಿ ಎಸ್ಡಿಆರ್ಎಫ್ ಅಡಿ 2,069 ಮತ್ತು ಎನ್ಡಿಆರ್ಎಫ್ ಅಡಿ 10,597 ಕೋಟಿ ರೂ. ಪರಿಹಾರ ಹಂಚಿಕೆಯಾಗಿದೆ.
ಬಿಎಸ್ವೈಗೆ ಪಾಠ: ಪ್ರಧಾನಿ ಮೋದಿ ಎದುರು ಕರ್ನಾಟಕದ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ್ದ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ಪಾಠ ಕಲಿಸಿತು. ರಾಜ್ಯಕ್ಕೆ ನೆರವಾಗುವ ಬದಲು ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತು ಎಂದು ಕಾಂಗ್ರೆಸ್ನ ಕೃಷ್ಣ ಭೈರೇಗೌಡ ಕಾಲೆಳೆದರು. ಕೇಂದ್ರ, ರಾಜ್ಯದಲ್ಲಿ 40 ವರ್ಷಗಳ ಕಾಲ ಡಬ್ಬಲ್ ಇಂಜಿನ್ ಸರ್ಕಾರವೇ ಇತ್ತಲ್ಲ, ಏನು ಮಾಡಿತು? ಎಂದು ಸಿದ್ದರಾಮಯ್ಯ ಅವರನ್ನು ಕಂದಾಯ ಸಚಿವ ಆರ್.ಅಶೋಕ್ ಕೆಣಕಿದರಲ್ಲದೆ, ಅನುದಾನ ಹಾಗೂ ಅಭಿವೃದ್ಧಿ ವಿಷಯಗಳಲ್ಲಿ ರಾಜ್ಯದ ಪಾಲಿಗೆ ಗೂಡ್ಸ್ನಂತಿತ್ತು ಎಂದರು. ಈಗಿನ ಡಬ್ಬಲ್ ಇಂಜಿನ್ ಸರ್ಕಾರ ರಿವರ್ಸ್ ಹೊರಟಿದೆ ಎಂದು ಕೃಷ್ಣ ಬೈರೇಗೌಡ ಛೇಡಿಸಿದರು.
ಹಿಂದುತ್ವದ ಸವಾಲು: ಕರೊನಾ ನೆಪವೊಡ್ಡಿ ಸುಳ್ಳು ಹೇಳಿ ಜನರಿಗೆ ದಿಕ್ಕು ತಪ್ಪಿಸಬೇಡಿ. ನಿಮ್ಮ ಕೈಲಾಗದಿದ್ದರೆ ಅಧಿಕಾರದಿಂದ ಕೆಳಗಿಳಿಯಿರಿ. ಹಿಂದುತ್ವ ಬಿಟ್ಟು ಬನ್ನಿ, 2023ರ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ಸವಾಲೆಸೆದರೆ, ಹಿಂದುತ್ವವೆಂದರೆ ಭಯವೇಕೇ? ಎಂದು ಆರ್.ಅಶೋಕ್ ಚುಚ್ಚಿದರು. ಜನರ ಭಾವನೆಗಳೊಂದಿಗೆ ಕೋಮುವಾದಿ ಬಿಜೆಪಿ ಆಟವಾಡು ತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ಚಾಟಿ ಬೀಸಿದರೆ, ದೇಶದಲ್ಲಿ ಸುದೀರ್ಘ ಆಡಳಿತ ನಡೆಸಿದ ಲೂಟಿ ಕಾಂಗ್ರೆಸ್ ಅನ್ನು ಜನರು ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ಸದಸ್ಯರು ತಿರುಗೇಟು ಕೊಟ್ಟರು.
ಕೋಳಿಗೂಡಿನಂಥ ವಸತಿಗೃಹದಲ್ಲಿ ಪೊಲೀಸರ ವಾಸ್ತವ್ಯ: ಹಳೆಯದಾಗಿರುವ ಪೊಲೀಸ್ ವಸತಿ ಗೃಹಗಳ ಪರಿಸ್ಥಿತಿ ಬಗ್ಗೆ ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಸೂಕ್ತ ಪ್ಲಾ್ಯನ್ ಇಲ್ಲದೆ ಈ ಹಿಂದೆ ಕಟ್ಟಿರುವ ಪೊಲೀಸ್ ವಸತಿಗೃಹಗಳು ಕೋಳಿಗೂಡಿನಂತಿವೆ, ನಿರ್ವಹಣೆಯೂ ಸರಿಯಾಗಿಲ್ಲ. ಹೀಗಿರುವಾಗ ಅವರು ಮನೆಯಲ್ಲಿ ಸಮಾಧಾನವಾಗಿರಲು ಹೇಗೆ ಸಾಧ್ಯ? ಹೀಗಾಗಿ ಕರ್ತವ್ಯಕ್ಕೆ ಬಂದ ಮೇಲೆ ಬೈಯಲು ಶುರು ಮಾಡುತ್ತಾರೆ, ಅವರ ಸಂಕಟ ಹೊರಗೆ ವ್ಯಕ್ತವಾಗುತ್ತದೆ ಎಂದು ಸ್ಪೀಕರ್ ಪೊಲೀಸರ ವಸತಿ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದರು. ಅದಕ್ಕೂ ಮುನ್ನ ಮಾತನಾಡಿದ ಜೆಡಿಎಸ್ನ ಶಿವಲಿಂಗೇಗೌಡ, ಪೊಲೀಸ್ ವಸತಿ ನಿಗಮ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಳೇ ಕಟ್ಟಡಗಳಿಗೆ ಲಕ್ಷಾಂತರ ರೂ. ವೆಚ್ಚ ಮಾಡಿ ರಿಪೇರಿ ಮಾಡುತ್ತಿದ್ದಾರೆ. ಅದು ಮುದುಕಿಗೆ ಸಿಂಗಾರ ಮಾಡಿದಂತಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿಎಸ್ಆರ್ ಅಡಿ ಪೊಲೀಸ್ ಠಾಣೆ ನಿರ್ಮಾಣ ಹಾಗೂ ಜೀಪ್ ನೀಡಲು ಮುಂದೆ ಬಂದರೂ ಇಲಾಖೆಯವರು ಅವಕಾಶ ಕೊಡುತ್ತಿಲ್ಲ ಎಂದು ಕಾಂಗ್ರೆಸ್ನ ಪ್ರಿಯಾಂಕ್ ಖರ್ಗೆ ಮತ್ತಿತರರು ಇಲಾಖೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಉತ್ತರ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸಿಎಸ್ಆರ್ ಸ್ವೀಕಾರ ಏಕೆ ಇಲ್ಲ ಎಂದು ಪರಿಶೀಲಿಸಲಾಗುತ್ತದೆ. ವಸತಿ ಗೃಹ ವಿಚಾರದಲ್ಲಿ ಎಲ್ಲರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದರು. ಗೃಹ 2025 ಯೋಜನೆಯಡಿ 10 ಸಾವಿರ ವಸತಿಗೃಹ ನಿರ್ವಿುಸಲಾಗುತ್ತಿದೆ. ಅನುದಾನವೂ ಇದೆ. ಜತೆಗೆ ಹಳೆಯ ಕಟ್ಟಡ ಅಥವಾ ಶೆಡ್ಗಳಲ್ಲಿರುವ 100 ಹಳೆಯ ಪೊಲೀಸ್ ಠಾಣೆಗಳಿಗೆ ಹೊಸ ಕಟ್ಟಡ ನಿರ್ವಿುಸಲಾಗುತ್ತಿದೆ. ಪೊಲೀಸರು ಕಚೇರಿ ಮತ್ತು ಮನೆಯಲ್ಲಿ ನೆಮ್ಮದಿಯಿಂದ ಇರಲು ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಬೆಳಗಾವಿ: ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಕಳೆದ ಎರಡು ವರ್ಷಗಳಲ್ಲಿ ಬಡವರಿಗೆ ಒಂದೇ ಒಂದು ಮನೆ, ನಿವೇಶನ ಮಂಜೂರಾಗಿಲ್ಲವೆಂಬ ಆರೋಪ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಸತಿ ಜಟಾಪಟಿಗೆ ಕಾರಣವಾಗಿ, ಸದನದಲ್ಲಿ ಸ್ವಲ್ಪ ಹೊತ್ತು ಕಾವೇರಿದ ವಾತಾವರಣ ನಿರ್ವಣವಾಯಿತು. ಅತಿವೃಷ್ಟಿ, ನೆರೆ ಪರಿಹಾರ ಬಗ್ಗೆ ಚರ್ಚೆ ಮುಂದುವರಿಸಿದ್ದ ಸಿದ್ದರಾಮಯ್ಯ ಗಮನ ವಸತಿ ಯೋಜನೆಯತ್ತ ಹರಿಯಿತು. ಕಾಂಗ್ರೆಸ್ ಆಡಳಿತಾವಧಿಯಲ್ಲಿ 15 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಡವರು ವಸತಿ ವಂಚಿತರಾಗಿದ್ದಾರೆ ಎಂದು ಟೀಕಿಸಿದರು. ‘ಮುಖ್ಯಮಂತ್ರಿಯಾಗಿದ್ದಿರಿ, ಪ್ರತಿಪಕ್ಷ ನಾಯಕರಾಗಿರುವಿರಿ. ಸುಳ್ಳನ್ನೇ ಸಾವಿರ ಬಾರಿ ಸತ್ಯ ಮಾಡಲು ಹೋಗ್ಬೇಡಿ. ಚುನಾವಣೆ ಹತ್ತಿರವಿರುವಾಗ ಮೂರು ತಿಂಗಳ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ಮಂಜೂರು ಮಾಡಿ, ಅನುದಾನ ಮೀಸಲಿಡದೆ ಹೋದಿರಿ’ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದು ಸಿದ್ದರಾಮಯ್ಯರನ್ನು ಕೆರಳಿಸಿತು.
ಒಂದೂ ಮನೆ ಮಂಜೂರಾಗಿಲ್ಲವೆಂದು ದಾಖಲೆ ಸಹಿತ ಸಾಬೀತಪಡಿಸಿರುವೆ. ಹಾಗೆಯೇ ನನ್ನ ಅಧಿಕಾರಾವಧಿ ಕೊನೆಯ ಬಜೆಟ್ (2017-18)ನಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಮನೆಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆಯೇ ಹೊರತು, ಮಂಜೂರು ಮಾಡಿಲ್ಲ. ಇದು ಸುಳ್ಳಾಗಿದ್ದರೆ, ತಕ್ಷಣ ಪ್ರತಿಪಕ್ಷ ನಾಯಕ ಸ್ಥಾನ ತೊರೆಯುವೆ ಎಂದು ಸಿದ್ದರಾಮಯ್ಯ ಸವಾಲೆಸೆದರು. ‘ಹಿಂದಿನ ಬಿಜೆಪಿ ಸರ್ಕಾರ 6 ಲಕ್ಷ ಮನೆಗಳನ್ನು ಮಂಜೂರು ಮಾಡಿ 3,315 ಕೋಟಿ ರೂ. ಅನುದಾನ ಕಾದಿರಿಸಿತ್ತು. ಆದರೆ ಕಾಂಗ್ರೆಸ್ ಅಧಿಕಾರಾವಧಿಯ ಕೊನೇ ದಿನಗಳಲ್ಲಿ (2018) 29,395 ಕೋಟಿ ರೂ. ಮೊತ್ತದ 18.59 ಲಕ್ಷ ಮನೆಗಳನ್ನು ಮಂಜೂರು ಮಾಡಿತು. ಅಗತ್ಯ ಅನುದಾನ ಕಾದಿಡದೆ ನಂತರ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಹಾಗೂ ಬಿಜೆಪಿ ಸರ್ಕಾರದ ಮೇಲೆ 22,619 ಕೋಟಿ ರೂ. ಹೊರೆ ಹೊರಿಸಿದ್ದು, ಇದನ್ನು ಸರಿದೂಗಿಸುವುದೇ ದೊಡ್ಡ ಸವಾಲಾಗಿ ಹೊಸ ಮನೆಗಳನ್ನು ಮಂಜೂರು ಮಾಡಿಲ್ಲ. ದಾಖಲೆ ಸಹಿತ ಚರ್ಚೆಗೆ ಸಿದ್ಧ, ತಪ್ಪಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ’ ಎಂದು ಸೋಮಣ್ಣ ಸವಾಲೆಸೆದರು.ಇಬ್ಬರೂ ಪೈಪೋಟಿಯ ಮೇಲೆ ದಾಖಲೆಗಳನ್ನು ಪ್ರದರ್ಶಿಸುತ್ತ ವಾದ-ಪ್ರತಿವಾದ ನಡೆಸಿರುವ ವೇಳೆ ರಮೇಶ್ಕುಮಾರ್ ಕ್ರಿಯಾಲೋಪವೆತ್ತಿ. ಆಶ್ವಾಸನೆ ನೀಡುವುದು ನೀತಿಯಾಗಿದ್ದು, ಮಂಜೂರು ಮಾಡಿದರೆ ಸರ್ಕಾರದ ಬದ್ಧತೆಯಾಗುತ್ತದೆ. ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತೇ ಹೊರತು ಮಂಜೂರು ಮಾಡಿದ್ದಲ್ಲ. ನಿಯಮಾವಳಿಗೆ ವಿರುದ್ಧ ಮಾತುಗಳು ದಾಖಲೆಗೆ ಹೋಗತಕ್ಕದ್ದಲ್ಲ. ಬಡವರ ಅಸಹಾಯಕತೆ ದುರ್ಬಳಕೆ ಕೂಡದು ಎಂದು ಏರುಧ್ವನಿ ಹೇಳಿದರೆ, ಸ್ಪೀಕರ್ ಮಧ್ಯೆಪ್ರವೇಶಿಸಿ ಈ ಚರ್ಚೆಗೆ ತೆರೆ ಎಳೆದು, ಅತಿವೃಷ್ಟಿ ಸಮಸ್ಯೆ ಕುರಿತು ಸಿದ್ದರಾಮಯ್ಯ ಮಾತು ಮುಂದುವರಿಸಲು ಅವಕಾಶ ಮಾಡಿಕೊಟ್ಟರು.
ಬಿಟ್ ಕಾಯಿನ್ ಹಗರಣ ವಿಷಯವನ್ನು ನಾವು ಕೈಬಿಟ್ಟಿಲ್ಲ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಂತರ ಸದನದಲ್ಲಿ ಮತ್ತೆ ಇದು ಮುನ್ನೆಲೆಗೆ ಬರಲಿದೆ. ಇದರಲ್ಲಿ ನಾವು ಓಲೈಕೆ ಕೂಡ ಮಾಡುತ್ತಿಲ್ಲ. ಸತ್ಯಾಂಶ ಮುಚ್ಚಿ ಹಾಕಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಮೊದಲಿನಿಂದಲೂ ಬಿಟ್ ಕಾಯಿನ್ ಹಗರಣ ತನಿಖೆಯಾಗಬೇಕು ಎನ್ನುತ್ತಿದ್ದೇವೆ. ಇದಕ್ಕೆ ನಮ್ಮ ಪಕ್ಷ ಬದ್ಧವಾಗಿದೆ.
| ಪ್ರಿಯಾಂಕ್ ಖರ್ಗೆ ಮಾಜಿ ಸಚಿವ
ಮಕ್ಕಳ ಸುರಕ್ಷತೆಗಾಗಿ ಶಾಲೆಗಳಲ್ಲಿ ಅಳವಿಡಿಸಿಕೊಳ್ಳ ಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಎಸ್.ವಿ.ಸಂಕನೂರು ಸಮಿತಿ ಶಿಫಾರಸುಗಳನ್ನು ಪರಿಶೀಲಿಸಿ, ಇಲಾಖೆಯಿಂದ ಹೊಸ ಅಧಿಸೂಚನೆ ಹೊರಡಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪರಿಷತ್ನಲ್ಲಿ ಹೇಳಿದರು. ಜೆಡಿಎಸ್ನ ಕೆ.ಟಿ.ಶ್ರೀಕಂಠೇಗೌಡ, ಎಸ್.ಎಲ್.ಬೋಜೆಗೌಡ, ಮರಿತಿಬ್ಬೇಗೌಡ, ಬಿಜೆಪಿಯ ಪುಟ್ಟಣ್ಣ ಅವರು, ರಾಜ್ಯದಲ್ಲಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮಾನ್ಯತೆ ಮುಂದುವರಿಸುವುದಕ್ಕಾಗಿ 61 ನಿಯಮಗಳ ಷರತ್ತು ವಿಧಿಸಲಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಹಣ ಪೀಕಲಾಗುತ್ತಿದೆ. ಮಾನ್ಯತೆ ಪಡೆಯದ ಶಾಲೆಗಳ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂಬ ಆದೇಶ ಕುರಿತು ಮಂಡಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದರು. ಈ ನಿಯಮ ಖಾಸಗಿ ಶಾಲೆಗಳಲ್ಲಿ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಎಲ್ಲ ಶಾಲೆಗಳಿಗೂ ಅನ್ವಯವಾಗಲಿದೆ. ಸದ್ಯಕ್ಕೆ ತಡೆಹಿಡಿಯಲಾಗಿದೆ ಎನ್ನಲಾದ ಶಿಕ್ಷಕರ ವೇತನವನ್ನು ಕೂಡಲೆ ಪಾವತಿಸಲಾಗುವುದು ಎಂದರು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ತಮಿಳುನಾಡಿನ ಖಾಸಗಿ ಶಾಲೆಯಲ್ಲಿ ನಡೆದ ದುರಂತದಲ್ಲಿ 94 ಮಕ್ಕಳು ಸಾವಿಗೀಡಾಗಿದ್ದರಿಂದ 2014ರಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ. ಈಗ ಮತ್ತೆ ಸುಪ್ರೀಂ ಆದೇಶದ ವಿರುದ್ಧವಾಗಿ ನಾವು ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳಿಲ್ಲದೆ ನಡೆಸಲು ಮುಂದಾಗವುದು ಹೇಗೆ ಸಾಧ್ಯ ಎಂಬ ಆತಂಕ ವ್ಯಕ್ತಪಡಿಸಿದರು. ಅಫಿಡವಿಟ್ನಲ್ಲಿನ ಮಾಹಿತಿ ಪರಿಶೀಲಿಸಿ, ಮತ್ತೊಮ್ಮೆ ಸಲ್ಲಿಸುವ ಕೆಲಸವಾಗಲಿ ಎಂದು ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸರ್ಕಾರಕ್ಕೆ ಸಲಹೆ ನೀಡಿದರು.
ಖಾಸಗಿ ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಕುರಿತ ಸರ್ಕಾರದ ಆದೇಶದ ಬಗ್ಗೆ ರ್ಚಚಿಸುತ್ತಿದ್ದ ಮರಿತಿಬ್ಬೆಗೌಡ, ಏಕಾಏಕಿ ರೋಷಾವೇಶದಿಂದ ಖಾಸಗಿ ಶಾಲೆಗಳನ್ನು ಬಂದ್ ಮಾಡಿ, ಹೋರಾಟ ನಡೆಸುತ್ತೇನೆಂದು ಸರ್ಕಾರಕ್ಕೆ ಸವಾಲು ಹಾಕಿದರು. ಶಾಲೆ ಇವರ ಅಪ್ಪಂದಾ ಎಂದೂ ಪ್ರಶ್ನಿಸಿದರು. ಇದರಿಂದ ಕುಪಿತಗೊಂಡ ಕಾನೂನು ಸಚಿವ ಮಾಧುಸ್ವಾಮಿ ಮಧ್ಯಪ್ರವೇಶಿಸಿ, ಶಾಲೆ, ಸರ್ಕಾರ ಇವರಪ್ಪಂದಾ? ಎಂದು ಸಭಾಪತಿಯವರನ್ನು ಪ್ರಶ್ನಿಸಿದರು, ಇವರು ಹೇಳಿದಂತೆ ಸರ್ಕಾರ ನಡೆಸಬೇಕಾ? ಸುಪ್ರೀಂ ಕೋರ್ಟ್ ಆದೇಶ ಪಾಲನೆ ಅಗತ್ಯತೆ ಅರಿತರೆ ಹೀಗಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ‘ಗೌಡರೇ, ಭಾವಾವೇಶಕ್ಕೆ ಒಳಗಾಗ ಬೇಡಿ, ನಿಮಗೆ ಬಿಪಿ ಹೆಚ್ಚಾಗಿ. ಏನಾದರೂ, ಹೆಚ್ಚು ಕಡಿಮೆ ಆದರೆ, ಏನು...?’ಎಂದು ಸಭಾಪತಿ ಯವರು, ಶಾಂತವಾಗಿ ಚರ್ಚೆ ನಡೆಸುವಂತೆ ಸಲಹೆ ನೀಡಿದರು. ಈಶ್ವರಪ್ಪ ಕೂಡ. ಗೌಡರೇ.. ಸಾವಕಾಶ. ಸತ್ತು ಗಿತ್ತು ಹೋದೀರಿ. ಸಾವಕಾಶವಾಗಿ ರ್ಚಚಿಸಿ ಎಂದು ತಾಳ್ಮೆಯ ಪಾಠ ಮಾಡಿದರು.
ರಾಜ್ಯದ ಏಳು ನಗರಗಳಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು ಮುಕ್ತಾಯಗೊಂಡ ಬಳಿಕ ಅವುಗಳ ನಿರ್ವಹಣೆ ಹೊಣೆಯನ್ನು ಆಯಾ ಮಹಾನಗರ ಪಾಲಿಕೆಗಳಿಗೆ ವಹಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು. ಪರಿಷತ್ನಲ್ಲಿ ಜೆಡಿಎಸ್ನ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿ, ಬೆಳಗಾವಿ ಮಹಾನಗರದಲ್ಲಿ ಈಗಾಗಲೆ ಶೇ.73 ಕಾಮಗಾರಿ ಪೂರ್ಣಗೊಂಡಿವೆ. ಏಳು ಕಾಮಗಾರಿಗಳು ದಂಡು ಮಂಡಳಿಯ ವ್ಯಾಪ್ತಿಯಲ್ಲಿ ಬರುವುದರಿಂದ ಸೇನೆಯ ಅನುಮತಿ ಸಿಕ್ಕಿರಲಿಲ್ಲ. ಇತ್ತೀಚೆಗೆ ಅನುಮತಿ ಲಭಿಸಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುತ್ತಿದೆ. ಉಳಿದಂತೆ ಏಳೂ ನಗರಗಳ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲೇ ಮುಕ್ತಾಯಗೊಳಿಸಲಾಗುವುದು ಎಂದರು.
ಶಾಸಕರ ಹೆಚ್ಚಿನ ಅನುದಾನ ಬಳಕೆ ಅವಕಾಶಕ್ಕಾಗಿ ಕ್ರಮ: ಕಳೆದ ಮೂರು ವರ್ಷಗಳಲ್ಲಿ ಅಂಗವಿಕಲರಿಗೆ 31.57 ಕೋಟಿ ರೂ. ಮೊತ್ತದಲ್ಲಿ ವಿವಿಧ ಯೋಜನೆಯಡಿ ಸೌಲಭ್ಯ ವಿತರಿಸಲಾಗಿದೆ. ಶಾಸಕರ ಅನುದಾನವನ್ನು ಅಂಗವಿಕಲರಿಗೆ ಇನ್ನಷ್ಟು ಹೆಚ್ಚಿನ ಸೌಲಭ್ಯ ಒದಗಿಸುವುದಕ್ಕಾಗಿ ಅವಕಾಶ ನೀಡಲು ಸರ್ಕಾರದ ಮಟ್ಟದಲ್ಲಿ ರ್ಚಚಿಸಿ ಕ್ರಮವಹಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಹೇಳಿದರು. ಬಿಜೆಪಿಯ ಹಣಮಂತ ನಿರಾಣಿ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಂಗವಿಕಲರು ಸೇರಿ ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ರಾಜ್ಯದಲ್ಲಿ 200ಕ್ಕೂ ಅಧಿಕ ಯೋಜನೆಗಳಿವೆ. ತ್ರಿಚಕ್ರ ವಾಹನಗಳ ವಿತರಣೆಗೆ ಶೇ.75ರಿಂದ 50-60ರಷ್ಟು ಅಂಗವೈಕಲ್ಯ ಹೊಂದಿದವರನ್ನೂ ಪರಿಗಣಿಸುವ ಬಗ್ಗೆ ರ್ಚಚಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಮೇಲ್ಜಾತಿ ಬಡವರ ಸ್ಟಾರ್ಟ್ಅಪ್ಗಳಿಗೆ ಶೇ.10 ಮೀಸಲು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಸ್ಟಾರ್ಟ್ ಅಪ್ಗಳಿಗೆ ನೀಡುವ ಕೈಗಾರಿಕಾ ನಿವೇಶನ ಮಾದರಿಯಲ್ಲಿ ಮೇಲ್ಜಾತಿಯ ಬಡವರ ಸ್ಟಾರ್ಟ್ಅಪ್ಗಳಿಗೂ ನಿವೇಶನ ಹಂಚಿಕೆ ಮಾಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಪರಿಷತ್ನಲ್ಲಿ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ನಡೆಸುತ್ತಿರುವ ‘ಉದ್ಯಮಿಯಾಗು-ಉದ್ಯೋಗ ನೀಡು’ ಕಾರ್ಯಕ್ರಮ ಕುರಿತ ಬಿಜೆಪಿಯ ಎಸ್.ವಿ.ಸಂಕನೂರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಉದ್ಯಮಿಯಾಗು-ಉದ್ಯೋಗ ನೀಡು ಕಾರ್ಯಕ್ರಮವನ್ನು ಶೀಘ್ರವೇ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ನಿರಾಣಿ ತಿಳಿಸಿದರು.
ಪುನಶ್ಚೇತನಕ್ಕೆ ಅವಕಾಶವಿಲ್ಲ: ರಾಜ್ಯದಲ್ಲಿ ನಡೆದ ಅಕ್ರಮ ಗಣಿಕಾರಿಕೆ ಹಾಗೂ ನಿಯಮಗಳ ಉಲ್ಲಂಘನೆಯ ಪ್ರಕರಣಗಳಿಂದ ವಸೂಲಿ ಮಾಡಿರುವ ದಂಡದ ಮೊತ್ತವನ್ನು ಗಣಿ ಪರಿಸರ ಪುನಶ್ಚೇತನಕ್ಕೆ ವಿನಿಯೋಗಿಸಲು ಅವಕಾಶವಿಲ್ಲ. ಗಣಿ ಪರಿಸರ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಡಿಎಂಎಫ್ಟಿ ನಿಧಿ ರಚಿಸಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು. ಅಕ್ರಮ ಗಣಿಗಾರಿಕೆಯಿಂದಾಗಿ ಹಾನಿಯಾದ ಪರಿಸರದ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಪಿ.ಆರ್.ರಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿ, ನಿಯಮ ಉಲ್ಲಂಘಿಸಿದ 500 ಗಣಿಗಾರಿಕೆಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಲಕ್ಷಾಂತರ ರೂ. ಮೊತ್ತದ ದಂಡ ವಸೂಲಿ ಮಾಡಲಾಗಿದೆ. ಡಿಎಂಎಫ್ಟಿ ನಿಧಿಗೆ ವಂತಿಕೆ ರೂಪದಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ಆಯಾ ಜಿಲ್ಲೆಯ ಗಣಿ ಮತ್ತು ಪರಿಸರ ಪುನಶ್ಚೇತನಕ್ಕೆ ವಿನಿಯೋಗಿಸಲಾಗುತ್ತಿದೆ ಎಂದು ವಿವರಿಸಿದರು.