

ಪ್ರಶಾಂತ ಹೂಗಾರ ಬೆಳಗಾವಿ
ತೀವ್ರ ಬರ ಹಿನ್ನೆಲೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದ್ದು, ಅದರಲ್ಲೂ ಬೀನ್ಸ್ ಬೆಲೆ ಕೆಜಿಗೆ 200 ರೂ. ಗಡಿದಾಟಿರುವುದು ಗ್ರಾಹಕರನ್ನು ಕಂಗಾಲಾಗಿಸಿದೆ. ಈ ಮೊದಲು ಕೆಜಿಗೆ 80ರಿಂದ 100 ರೂ.ಗೆ ಸಿಗುತ್ತಿದ್ದ ಬೀನ್ಸ್ ದರ ಇದೀಗ ದುಪ್ಪಟ್ಟಾಗಿದೆ. ಗೃಹಬಳಕೆ, ಹೋಟೆಲ್, ಮದುವೆ ಹಾಗೂ ವಿವಿಧ ಸಮಾರಂಭಗಳಲ್ಲಿ ಅಡುಗೆಗೆ ಅವಶ್ಯವಿರುವ ಬೀನ್ಸ್ ಬೆಲೆ ಏಕಾಏಕಿ ಹೆಚ್ಚಾಗಿರುವುದು ಗ್ರಾಹಕರ ಜೇಬು ಸುಡುತ್ತಿದೆ.
ಬರ ಹಾಗೂ ಅಂತರ್ಜಲಮಟ್ಟ ಕುಸಿತದ ಹಿನ್ನೆಲೆಯಲ್ಲಿ ಈ ಬಾರಿ ಬೀನ್ಸ್ ಬೆಳೆಯುವ ಪ್ರದೇಶ 100 ಹೆಕ್ಟೇರ್ ಕುಸಿತಗೊಂಡಿದೆ. ಬೀನ್ಸ್ ಉತ್ಪಾದನೆಗಿಂತ ಬೇಡಿಕೆ ಪ್ರಮಾಣವೇ ಹೆಚ್ಚಿರುವ ಕಾರಣ ಬೆಲೆ ದಿಢೀರ್ ಏರಿಕೆ ಕಂಡಿದೆ. ಬೋರ್‌ವೆಲ್‌ಗಳಲ್ಲೂ ನೀರಿನ ಪ್ರಮಾಣ ಕುಸಿದಿರುವುದರಿಂದ ಸಮೃದ್ಧ ತರಕಾರಿ ಬೆಳೆಯಲು ನೀರು ಸಾಲುತ್ತಿಲ್ಲ. ಹಾಗಾಗಿ, ಬೀನ್ಸ್ ಸೇರಿ ಎಲ್ಲ ತರಕಾರಿ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. ಇದರಿಂದ ಮಾರುಕಟ್ಟೆಯಲ್ಲಿ ದರ ಏರುತ್ತಲೇ ಸಾಗಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.
ಮಾರ್ಕೆಟ್‌ನಲ್ಲಿ ಅಪರೂಪ: ಎಲ್ಲರೂ ಇಷ್ಟಪಡುವ ಬೀನ್ಸ್ ಕೆಜಿಗೆ ಇದೀಗ 200 ರೂ.ಆಗಿದೆ. ಇಷ್ಟೊಂದು ಹಣ ಕೊಟ್ಟು ಖರೀದಿ ಮಾಡಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಗ್ರಾಹಕರು ಬೀನ್ಸ್ ಕೊಳ್ಳಲು ಮುಂದೆ ಬಾರದಿರುವುದರಿಂದ ಮಾರಾಟಗಾರರೂ ಸಗಟು ಮಾರುಕಟ್ಟೆಯಲ್ಲಿ ಬೀನ್ಸ್ ಖರೀದಿಸಲು ಹಿಂಜರಿಯುವಂತಾಗಿದೆ. ಉತ್ಪಾದನೆಯೇ ಕಡಿಮೆ ಇರುವುದರಿಂದ ಮಾರುಕಟ್ಟೆಯಲ್ಲಿ ಬೀನ್ಸ್ ಕಾಣಸಿಗುವುದೂ ಅಪರೂಪವಾಗಿದೆ.
ಅನ್ಯ ತರಕಾರಿ ರೇಟ್ ಕೂಡ ಜಂಪ್: ಬೀನ್ಸ್ ಹೊರತುಪಡಿಸಿ ಇತರ ತರಕಾರಿಗಳ ದರದಲ್ಲೂ ಬೆಲೆ ಏರಿಕೆಯಾಗಿದೆ. ಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ, ಹಿರೇಕಾಯಿ, ಸವತೆಕಾಯಿ, ಚವಳಿಕಾಯಿ ದರದಲ್ಲಿಯೂ ಕೆಜಿಗೆ 20ರೂ. ಹೆಚ್ಚಳವಾಗಿದೆ. ಇನ್ನು ಸೊಪ್ಪುಗಳ ಬೆಲೆಯೂ ಹೈಜಂಪ್ ಮಾಡಿರುವುದು ಗ್ರಾಹಕರಿಗೆ ಹೊರೆಯಾಗಿದೆ. ರಾಜಗಿರಿ, ಸಬ್ಬಸಗಿ, ಮೆಂತೆ ಒಂದು ಸಿವುಡಿಗೆ 25ರಿಂದ 30 ರೂ. ದರವಿದೆ. ಪ್ರತಿಯೊಬ್ಬರೂ ಅಡುಗೆಯಲ್ಲಿ ಬಳಸುವ ಕೊತ್ತಂಬರಿ 50 ರೂ.ಗೆ ಒಂದು ಕಟ್ಟಿನಂತೆ ಮಾರಾಟವಾಗುತ್ತಿರುವುದು ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸಗಟು ಮಾರುಕಟ್ಟೆಯಲ್ಲೇ ಬೀನ್ಸ್ ಬೆಲೆ ಕೆಜಿಗೆ 150-180 ರೂ. ಆಗಿದೆ. ಖರೀದಿ ಮಾಡಿ ಚಿಲ್ಲರೆ ಮಾರುಕಟ್ಟೆಗೆ ತಂದರೆ ಗ್ರಾಹಕರು ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಉತ್ತಮ ಮಳೆಯಾಗಿ ದರ ಹತೋಟಿಗೆ ಬರುವವರೆಗೂ ತರಕಾರಿ ಮಾರಾಟ ಸುಲಭವಂತೂ ಅಲ್ಲ.ಯಲ್ಲಪ್ಪ ಕೊಪ್ಪದ, ತರಕಾರಿ ಮಾರಾಟಗಾರ ಬೆಳಗಾವಿ ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ 360 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೀನ್ಸ್ ಬೆಳೆಯಲಾಗಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಾರದಿರುವುದು ಒಂದೆಡೆಯಾದರೆ ಉತ್ಪನ್ನಕ್ಕಿಂತ ಬೇಡಿಕೆ ಪ್ರಮಾಣವು ಹೆಚ್ಚಿರುವ ಕಾರಣ ಬೀನ್ಸ್ ಬೆಲೆ ದಿಢೀರ್ ಏರಿಕೆ ಕಂಡಿದೆ.ಮಹಾಂತೇಶ ಮುರಗೋಡ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬೆಳಗಾವಿ