ಅತಂತ್ರ ಸ್ಥಿತಿಯಲ್ಲಿ ವಸತಿ ನಿಲಯ ವಿದ್ಯಾರ್ಥಿಗಳು!

01-06-Shiva-2
ರಾಯಚೂರಿನ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತಿಪರ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಆಡಳಿತ ಮಂಡಳಿ ಕೋಟಾದಡಿ ಕಾಲೇಜು ಪ್ರವೇಶ ಪಡೆದ ವಿದ್ಯಾರ್ಥಿನಿಯರು ವಸತಿ ನಿಲಯ ಖಾಲಿ ಮಾಡುವಂತೆ ನೋಟಿಸ್ ಅಂಟಿಸಿರುವ ನೋಟಿಸ್.
Published on

ರಾಯಚೂರು: ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತಪರ ವಸತಿನಿಲಯಗಳಲ್ಲಿನ ಆಡಳಿತ ಮಂಡಳಿ ಕೋಟಾದಲ್ಲಿ ಕಾಲೇಜು ಪ್ರವೇಶ ಪಡೆದ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದಿಂದ ಹೊರಹೋಗುವಂತೆ ಆದೇಶ ಮಾಡಿರುವುದು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ.
ಕಳೆದ ಎರಡ್ಮೂರು ವರ್ಷಗಳ ಹಿಂದೆ ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ನೀಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಜಿಲ್ಲೆಯ ನಾಲ್ಕು ವೃತ್ತಿಪರ ವಸತಿ ನಿಲಯಗಳಲ್ಲಿ ಒಟ್ಟು 298 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ.
ಆದರೆ ಇಲಾಖೆ ಆಯುಕ್ತರ ಕಚೇರಿಯಿಂದ ೆ.1ರಂದು ಹೊರಡಿಸಿ ಆಡಳಿತ ಮಂಡಳಿ ಕೋಟಾದಲ್ಲಿ ಕಾಲೇಜು ಪ್ರವೇಶ ಪಡೆದ ವಿದ್ಯಾರ್ಥಿಗಳು ವಸತಿ ನಿಲಯ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಆದೇಶ ಹೊರಡಿಸಿದ್ದರಿಂದ ವಾರ್ಡನ್‌ಗಳು ವಿದ್ಯಾರ್ಥಿಗಳಿಗೆ ವಸತಿನಿಲಯ ಖಾಲಿ ಮಾಡುವಂತೆ ಸೂಚನೆ ನೀಡಿದ್ದಾರೆ.
ಆದೇಶದಿಂದ ನಗರದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ವೃತ್ತಿಪರ ವಸತಿ ನಿಲಯದಲ್ಲಿರುವ ಒಟ್ಟು 240 ವಿದ್ಯಾರ್ಥಿನಿಯಲ್ಲಿ ಆಡಳಿತ ಮಂಡಳಿ ಕೋಟಾದಲ್ಲಿ ಕಾಲೇಜು ಪ್ರವೇಶ ಪಡೆದಿರುವ 130 ವಿದ್ಯಾರ್ಥಿಯರು ವಸತಿ ನಿಲಯದಿಂದ ಹೊರಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ವಸತಿ ನಿಲಯಗಳ್ಲಲಿ ಪ್ಯಾರಾ ಮೆಡಿಕಲ್, ಐಟಿಐ, ಜೆಎನ್‌ಎಂ, ನರ್ಸಿಂಗ್, ಬಿಎಡ್ ಸೇರಿದಂತೆ ಹಲವು ವೃತ್ತಪರ ಕೋರ್ಸ್‌ಗಳಿಗೆ ಕೇವಲ ಹತ್ತರಿಂದ ಹದಿನೈದು ಸಾವಿರ ರೂ. ನೀಡಿ ಆಡಳಿತ ಮಂಡಳಿ ಕೋಟಾದಡಿ ಕಾಲೇಜು ಪ್ರವೇಶ ಪಡೆದ ಬಡ ವಿದ್ಯಾರ್ಥಿಗಳು ವಸತಿ ನಿಲಯದಿಂದ ಹೊರ ಹಾಕಿದರೆ ಶಿಕ್ಷಣ ಮುಗಿಸಲು ಪರದಾಡಬೇಕಾದ ಸ್ಥಿತಿ ಉಂಟಾಗಲಿದೆ.
ವಸತಿ ನಿಲಯಗಳಲ್ಲಿ ಗ್ರಾಮೀಣ ಭಾಗದ ಮತ್ತು ಬಡ ವಿದ್ಯಾರ್ಥಿಗಳೇ ಪ್ರವೇಶ ಪಡೆದಿದ್ದು, ಇನ್ನೂ ಅವರ ಕೋರ್ಸ್‌ಗಳು ಮುಗಿದಿಲ್ಲ. ಇಂತಹ ಸಂದರ್ಭದಲ್ಲಿ ಅವರಿಗೆ ವಸತಿ ನಿಲಯದಲ್ಲಿ ಇರಲು ಅವಕಾಶ ನೀಡದಿದ್ದರೆ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಿಕೊಂಡು ಶಿಕ್ಷಣ ಮುಗಿಸಲು ಸಾಧ್ಯವಾಗದೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.
ಇದು ಕೇವಲ ರಾಯಚೂರು ಜಿಲ್ಲೆ ಮಾತ್ರವಲ್ಲ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿಯೂ ಸಮಸ್ಯೆ ಎದುರಾಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಡಳಿತ ಮಂಡಳಿ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಇರುವುದು ಸಮಸ್ಯೆಯಾಗಿದೆ. ಇಲಾಖೆ ಅಕಾರಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಪೂರ್ಣಗೊಳ್ಳುವವರೆಗೆ ಇರಲು ಅವಕಾಶ ನೀಡಬೇಕಾಗಿದೆ.

ಕಾರಣವೇನು?
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗುತ್ತದೆ. ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ನಡೆಸಲಾಗುವ ವಸತಿ ನಿಲಯಗಳಲ್ಲಿ ಪ್ರವೇಶ ನೀಡಲಾಗುತ್ತಿದೆ. ಮಂಜೂರಾಗುವ ವಿದ್ಯಾರ್ಥಿ ವೇತನದಡಿ ವಸತಿ ನಿಲಯ ನಿರ್ವಹಣಾ ವೆಚ್ಚವನ್ನು ಮರು ಹೊಂದಾಣಿಕೆ ಮಡಿ ಭೋಜನಾ ವೆಚ್ಚ ಭರಿಸಲಾಗುತ್ತದೆ. ಆದರೆ ಆಡಳಿತ ಮಂಡಳಿ ಕೋಟಾದಡಿ ಕಾಲೇಜು ಪ್ರವೇಶ ಪಡೆದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿರುವ ಕಾರಣ ವಸತಿ ನಿಲಯ ಪ್ರವೇಶಕ್ಕೆ ಅವಕಾಶ ನೀಡಲಾಗುವುದಿಲ್ಲ ಎನ್ನುವ ಆದೇಶ ಹೊರಡಿಸಲಾಗಿದೆ. ಈ ಹಿಂದೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ ಇಲಾಖೆಯೇ ಅವರನ್ನು ಈಗ ಹೊರ ಹೋಗಿ ಎನ್ನುವ ಸೂಚನೆ ನೀಡುತ್ತಿದೆ.

ನಿಯಮಾನುಸಾರ ಆಡಳಿತ ಮಂಡಳಿ ಕೋಟಾದಡಿ ಕಾಲೇಜು ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಸತಿ ನಿಲಯ ಪ್ರವೇಶಕ್ಕೆ ಅವಕಾಶವಿಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಿಂದೆ ಪ್ರವೇಶ ನೀಡಲಾಗಿದೆ. ಹಿರಿಯ ಅಕಾರಿಗಳೊಂದಿಗೆ ಚರ್ಚಿಸಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಅವರ ಶಿಕ್ಷಣ ಪೂರ್ಣಗೊಳ್ಳುವವರೆಗೆ ವಸತಿ ನಿಲಯದಲ್ಲಿ ಇರಲು ಅವಕಾಶ ಕಲ್ಪಿಸಲಾಗುವುದು.

  • ಮಹೇಶ ಪೋತದಾರ, ಉಪ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ರಾಯಚೂರು.

ಈ ಹಿಂದೆ ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಿ ಪ್ರವೇಶ ಪಡೆದಿದ್ದೇನೆ. ಬಿಎಡ್ ಕೋರ್ಸ್ ಇನ್ನೂ ಪೂರ್ಣಗೊಂಡಿಲ್ಲ. ಮಧ್ಯದಲ್ಲಿಯೇ ವಸತಿ ನಿಲಯ ಬಿಟ್ಟು ಹೋಗಿ ಎಂದರೆ ಎಲ್ಲಿಗೆ ಹೋಗುವುದು. ವಸತಿ ನಿಲಯದಿಂದ ಹೊರ ಹಾಕಿದರೆ ಶಿಕ್ಷಣವನ್ನು ಅರ್ಧದಲ್ಲಿಯೇ ಬಿಡಬೇಕಾಗುತ್ತದೆ. ಕೋರ್ಸ್ ಪೂರ್ಣಗೊಳ್ಳುವವರೆಗೆ ಇರಲು ಅವಕಾಶ ನೀಡಬೇಕು

  • ಶ್ರೀದೇವಿ, ಬಿಎಡ್ ವಿದ್ಯಾರ್ಥಿನಿ, ಅಂಬೇಡ್ಕರ್ ವೃತ್ತಿಪರ ವಸತಿನಿಲಯ, ರಾಯಚೂರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net