ಅಮ್ಮ ಬೈದಿದ್ದಕ್ಕೆ ಕೋಣೆ ಸೇರಿ ಬಾಗಿಲು ಹಾಕ್ಕೊಂಡ ಬಾಲಕ!

door lock
Published on

ಉಡುಪಿ: ಮೊಬೈಲ್ ಬಳಕೆ ವಿಚಾರದಲ್ಲಿ ಅಮ್ಮ ಬೈದಿದ್ದಕ್ಕೆ 17 ವರ್ಷದ ಬಾಲಕನೊಬ್ಬ ರೂಂ ಒಳಗೆ ಸೇರಿಕೊಂಡು ಬಾಗಿಲು ತೆಗೆಯದೇ ಆತಂಕ ಸೃಷ್ಟಿಸಿದ ಘಟನೆ ಮಣಿಪಾಲದಲ್ಲಿ ಶನಿವಾರ ನಡೆದಿದೆ. ಮಣಿಪಾಲ ಆಕಾಡೆಮಿ ಆಫ್ ಹೈಯರ್ ಎಜುಕೇಶನ್ ಕ್ಯಾಂಪಸ್‌ನಲ್ಲಿರುವ ಎ-ಒನ್ ವಸತಿ ಸಮುಚ್ಚಯದ 5ನೇ ಮಹಡಿಯಲ್ಲಿ ಘಟನೆ ನಡೆದಿದ್ದು, ಉಡುಪಿ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸಿದೆ. ರಾತ್ರಿಯಿಡೀ ಮೊಬೈಲ್ ಬಳಕೆ ಮಾಡುತ್ತಿದ್ದ ಬಗ್ಗೆ ಬೆಳಗ್ಗೆ ಅಮ್ಮ ಬಾಲಕನಿಗೆ ಬೈದಿದ್ದು, ಇಬ್ಬರ ನಡುವೆ ಗಲಾಟೆಯಾಗಿದೆ. ಬಳಿಕ ಬಾಲಕ ರೂಂ ಲಾಕ್ ಮಾಡಿಕೊಂಡು ಒಳಗೆ ಇದ್ದು, ಎಷ್ಟೇ ಸಮಯವಾದರೂ ಬಾಗಿಲು ತೆಗೆಯಲಿಲ್ಲ. ಇದರಿಂದ ಆತಂಕಗೊಂಡ ಪಾಲಕರು ಬೆಳಗ್ಗೆ 10.15ಕ್ಕೆ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. 7 ಜನರ ಅಗ್ನಿ ಶಾಮಕ ದಳ ರೋಪ್ ಸಹಾಯದಿಂದ ಐದನೇ ಮಹಡಿ ಕಿಟಕಿ ಬಳಿಗೆ ತೆರಳಿದೆ. ಬಳಿಕ ಮನೆಯ ರೂಂ ಬಾಗಿಲನ್ನು ಒಡೆದು ಬಾಲಕನನ್ನು ರಕ್ಷಿಸಲಾಗಿದೆ. ಬಾಲಕ ಅರೆ ಪ್ರಜ್ಞಾವಸ್ಥೆಯಲ್ಲಿದ್ದು, ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ‘ಬಾಲಕ ಸುರಕ್ಷಿತವಾಗಿದ್ದು, ಅಧರ್ಗಂಟೆಯಲ್ಲಿ ಕಾರ್ಯಾಚರಣೆ ಮುಗಿಸಿದ್ದೇವೆ’ ಎಂದು ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ವಸಂತ್ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net