

ಮಂಡ್ಯ: ಸಾರ್ವಜನಿಕರ ಮನೆಗೆ ಪೊಲೀಸರು ಭೇಟಿ ನೀಡಿ ಅವರ ಸಮಸ್ಯೆ ಆಲಿಸುವ ವಿಶೇಷ ಕಾರ್ಯಕ್ರಮ ‘ಮನೆ-ಮನೆಗೆ ಪೊಲೀಸ್’ಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಇಂತಹದೊಂದು ವಿಭಿನ್ನ ಕಾರ್ಯಕ್ರಮ ಜನರಿಗೆ ಇಷ್ಟವಾಗುತ್ತಿದೆ.
ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಸಾರ್ವಜನಿಕ ಸ್ನೇಹಿಯಾಗಿ ಪರಿವರ್ತಿಸುವ ಉದ್ದೇಶದಿಂದ ಮನೆ-ಮನೆಗೆ ಪೊಲೀಸ್ ಪರಿಕಲ್ಪನೆಯೊಂದಿಗೆ ಜಿಲ್ಲೆಯಲ್ಲೂ ಸುಧಾರಿತ ಗಸ್ತು ವ್ಯವಸ್ಥೆ ಜಾರಿಗೆ ಬಂದಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು, ಅಪರಾಧಗಳನ್ನು ತಡೆಯುವುದು ಮತ್ತು ಅಪರಾಧಿಗಳನ್ನು ಪತ್ತೆ ಮಾಡುವ ಉದ್ದೇಶದಿಂದ ಯೋಜನೆ ಅನುಷ್ಠಾನಗೊಂಡಿದೆ.
ಪ್ರಸ್ತುತ ಪೊಲೀಸ್ ವ್ಯವಸ್ಥೆಯು ಬಹುತೇಕ ಪ್ರತಿಕ್ರಿಯೆ ಸೇವೆಯನ್ನು ಮಾತ್ರವೇ ಒದಗಿಸುತ್ತಿದೆ. ಅಂದರೆ ಸಾರ್ವಜನಿಕರು ನೀಡುವ ದೂರುಗಳ/ಅಹವಾಲುಗಳ ಆಧಾರದ ಮೇಲೆ ಮಾತ್ರವೇ ಪ್ರತಿಕ್ರಿಯಿಸಲಾಗುತ್ತಿದೆ. ಆದರೆ, ಈ ವ್ಯವಸ್ಥೆಯನ್ನು ಸಕ್ರಿಯ ಸೇವೆ ಒದಗಿಸುವ ವ್ಯವಸ್ಥೆಯಾಗಿ ಪರಿವರ್ತನೆಗೊಳಿಸುವೆಡೆಗೆ ಹೆಜ್ಜೆ ಇಡುವ ನಿಟ್ಟಿನಲ್ಲಿ ಮನೆ-ಮನೆಗೆ ಪೊಲೀಸ್ ಕರ‌್ಯಕ್ರಮ ಅನುಷ್ಠಾನಗೊಳಿಸಲಾಗಿದೆ.
ಇದರಿಂದ ಪೊಲೀಸ್ ಸೇವೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿ, ಜನರು ಮತ್ತು ಪೊಲೀಸರ ನಡುವೆ ನಿಕಟ ಸಂಬಂಧವೇರ್ಪಟ್ಟ ಪರಿಣಾಮ ಸಮಾಜದಲ್ಲಿ ಗಂಭೀರ ಸಮಸ್ಯೆ ಉದ್ಭವಿಸುವ ಮೊದಲೇ ಅದಕ್ಕೆ ಪರಿಹಾರೋಪಾಯಗಳೊಂದಿಗೆ ಸನ್ನದ್ಧರಾಗಿರುವ ವಾತಾವರಣ ರೂಪುಗೊಳ್ಳಲಿದೆ ಎಂಬುದು ಪೊಲೀಸ್ ಇಲಾಖೆಯ ಉದ್ದೇಶವಾಗಿದೆ. ಈ ಸುಧಾರಿತ ಗಸ್ತು ವ್ಯವಸ್ಥೆಯು ನಾಗರಿಕರ ಸಮಸ್ಯೆ, ಸಲಹೆ, ದೂರು ಆಲಿಸಲು ಪೊಲೀಸ್ ಸಿಬ್ಬಂದಿಯೇ ಮನೆ ಬಾಗಿಲಿಗೆ ಬರಲಿದ್ದಾರೆ. ಪ್ರತಿ ಠಾಣಾಧಿಕಾರಿಗಳು ತಮ್ಮ ಬೀಟ್ ಅಧಿಕಾರಿ ಮತ್ತು ಸಿಬ್ಬಂದಿ ಸಂವಹಿಸುವ ಸಾರ್ವಜನಿಕ ಅಹವಾಲುಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ಅಂತೆಯೇ ಪರಿಹಾರ ಒದಗಿಸಲು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಜನರ ನೀಡುವ ಅಹವಾಲು/ದೂರು/ಸಮಸ್ಯೆಯು ಬೇರೆ ಇಲಾಖೆಗೆ ಸಂಬಂಧಿಸಿದ ಅಹವಾಲುಗಳಿದ್ದರೆ, ಆಯಾಯ ಇಲಾಖೆಗೆ ಕಳುಹಿಸುವ ಕೆಲಸವನ್ನು ಪೊಲೀಸರೇ ಮಾಡಿದ್ದಾರೆ.
ಈ ಯೋಜನೆಗೆಂದು ಜಿಲ್ಲೆಯಲ್ಲಿ ಈಗಾಗಲೇ 320 ಬೀಟ್‌ಗಳನ್ನು ಸೃಷ್ಟಿಸಲಾಗಿದೆ. ಅಂತೆಯೇ ಪ್ರತಿ ಬೀಟ್‌ಗೆ ಇಬ್ಬರಂತೆ 640 ಪೊಲೀಸ್ ಸಿಬ್ಬಂದಿ ನಿಯೋಜಿಸುವುದರ ಜತೆಗೆ ಅವರೆಲ್ಲರಿಗೂ ಈಗಾಗಲೇ ಸಾಮೂಹಿಕ ತರಬೇತಿ ನೀಡಲಾಗಿದೆ. ಈಗಾಗಲೇ ಮನೆ-ಮನೆಗೆ ಸಿಬ್ಬಂದಿ ಭೇಟಿ ನೀಡಿ ಅಹವಾಲು ಆಲಿಸುತ್ತಿದ್ದಾರೆ.
27 ಅಂಶಗಳ ಸುತ್ತೋಲೆ
ಮನೆ-ಮನೆಗೆ ಪೊಲೀಸ್ ಪರಿಕಲ್ಪನೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ 27 ಅಂಶಗಳ ಸುತ್ತೋಲೆಯನ್ನು ಇಲಾಖೆ ಹೊರಡಿಸಿದೆ. ಅಷ್ಟೂ ಅಂಶಗಳ ಬಗ್ಗೆ ಜಿಲ್ಲೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.
ಇನ್ನು ಪ್ರಮುಖ ಅಂಶಗಳೆಂದರೆ ಪ್ರತಿ ಪೊಲೀಸ್ ಠಾಣೆಗಳ ಸರಹದ್ದುಗಳ ಭೌಗೋಳಿಕ ಪ್ರದೇಶಗಳನ್ನು ವಿಂಗಡಿಸಿಕೊಳ್ಳುವುದು(ಇ-ಬೀಟ್ ವ್ಯವಸ್ಥೆ ಅನ್ವಯ) ಮತ್ತು ಮನೆಗಳನ್ನು ಪಟ್ಟಿ ಮಾಡಿಕೊಳ್ಳುವುದು. ನಂತರ ಆ 40-50 ಮನೆಗಳ ಸಮೂಹವನ್ನು ರಚಿಸಿಕೊಳ್ಳುವುದು. ಈ ಸಮೂಹದ ಎಲ್ಲ ಮನೆಗಳಿಗೆ ಬೀಟ್ ಪೊಲೀಸ್ ಸಿಬ್ಬಂದಿ ಭೇಟಿ ನೀಡುವುದು. ಈ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕು. ಯಾವುದೇ ಮನೆಯಿಂದ ಭೇಟಿ ಪ್ರಕ್ರಿಯೆಯಿಂದ ಹೊರಗುಳಿಯುವಂತಿಲ್ಲ. ಮನೆ ಮನೆಗೆ ಭೇಟಿ ವೇಳೆ ಸಾರ್ವಜನಿಕರಿಂದ ಲಿಖಿತ/ಮೌಖಿಕವಾಗಿ ಅಹವಾಲು ಸ್ವೀಕರಿಸಬೇಕು. ಅವುಗಳಿಗೆ ಸೂಕ್ತವಾಗಿ ಸ್ಪಂದಿಸಿ, ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.
ಮನೆಗಳ ಭೇಟಿ ವೇಳೆ ಮನೆಯ ಸುತ್ತಮುತ್ತಲ ಭದ್ರತಾ ಮತ್ತು ಸುರಕ್ಷಿತ ವಾತಾವರಣವನ್ನು ಗಮನಿಸಬೇಕು. ಲೋಪಗಳಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಮನೆಗೆಯವರಿಗೆ ಸಲಹೆ-ಮಾರ್ಗದರ್ಶನ ನೀಡಬೇಕು. ಮನೆಯ ಕುಟುಂಬದ ಮುಖ್ಯಸ್ಥರೊಂದಿಗೆ ಬೀಟ್ ಸಿಬ್ಬಂದಿ ಉತ್ತಮ ಬಾಂಧವ್ಯ ಬೆಳೆಸಿಕೊಂಡು, ಅನ್ಯೋನ್ಯತೆ ಕಾಯ್ದುಕೊಳ್ಳಬೇಕು. ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪೊಲೀಸ್ ಠಾಣೆ ಮತ್ತು ಅಧಿಕಾರಿಗಳ ದೂರವಾಣಿ ಸಂಖ್ಯೆ, ನಿಯಂತ್ರಣ ಕೊಠಡಿ 112 ಸಂಖ್ಯೆ ನೀಡಿ, ಎಂತಹದ್ದೇ ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆಗೆ ಕರೆ ಮಾಡುವಂತೆ ಉತ್ತೇಜಿಸಬೇಕು. ಮನೆ ಮನೆಗಳಲ್ಲಿ ಸ್ವೀಕೃತವಾಗುವ ಎಲ್ಲ ಅಹವಾಲು/ದೂರುಗಳ ಪಟ್ಟಿಯನ್ನು ಒಂದು ರಿಜಿಸ್ಟರ್‌ನಲ್ಲಿ ದಾಖಲಿಸಬೇಕು. ಅಹವಾಲುಗಳ ವಿವರ, ದೂರುದಾರರ ಹೆಸರು, ಸಂಪರ್ಕ ಸಂಖ್ಯೆ, ವಿಳಾಸ, ಕೈಗೊಂಡ ಕ್ರಮಗಳು, ಒದಗಿಸಲಾದ ಪರಿಹಾರ ಮುಂತಾದ ಮಾಹಿತಿಯನ್ನು ನಮೂದಿಸಬೇಕು. ನಂತರ ಕ್ರೋಢೀಕೃತ ಅಂಕಿ ಅಂಶಗಳ ಮಾಹಿತಿಯನ್ನು ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಬೇಕು.
ಅತ್ಯುತ್ತಮರಿಗೆ ಸಿಗಲಿದೆ ಪ್ರಶಸ್ತಿ
ಪ್ರತಿ ತಿಂಗಳ ಎರಡನೇ ಶನಿವಾರ ಠಾಣಾ ವ್ಯಾಪ್ತಿಯ ಎಲ್ಲ ಮನೆಗಳ ಸಮೂಹದ ಮುಖ್ಯಸ್ಥರು ಹಾಗೂ ಇತರೆ ನಾಗರಿಕರೊಂದಿಗೆ ಸಾರ್ವಜನಿಕ ಸಂಪರ್ಕ ಸಭೆ ನಡೆಸಬೇಕು. ಅತ್ಯುತ್ತಮ ಸಲಹೆ ನೀಡುವ, ಉತ್ತಮ ಹಾಗೂ ಚತುರರಾಗಿ ಮಾಹಿತಿ ನೀಡುವ ಹಾಗೂ ಪೊಲೀಸರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿ, ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣರಾಜ್ಯೋತ್ಸವ ದಿನದಂದು ಅತ್ಯುತ್ತಮ ಪೊಲೀಸ್ ಸಲಹೆಗಾರರು ಹಾಗೂ ಅತ್ಯುತ್ತಮ ಪೊಲೀಸ್ ಸ್ನೇಹಿತರು ಎಂಬ ಪ್ರಶಸ್ತಿ ಪ್ರದಾನ ಮಾಡುವಂತೆ ಸುತ್ತೋಲೆಯಲ್ಲಿ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.
ಸಮಸ್ಯೆ ಹೇಳಿಕೊಳ್ಳುತ್ತಿರುವ ಜನರು
ಯೋಜನೆಯಿಂದ ಜನರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಅನುಕೂಲವಾಗುತ್ತಿದೆ ಎನ್ನುವ ಅಂಶ ಅದಾಗಲೇ ಗೊತ್ತಾಗುತ್ತಿದೆ. ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಪುಂಡರ ಹಾವಳಿ, ಜನ್ಮದಿನದ ಹೆಸರಿನಲ್ಲಿ ಮಿತಿ ಮೀರಿದ ಸಂಭ್ರಮಾಚರಣೆ, ಕುಡುಕರಿಂದಾಗುತ್ತಿರುವ ಕಿರಿಕಿರಿ ಬಗ್ಗೆ ಕೆಲವರು ಹೇಳಿಕೊಳ್ಳುತ್ತಿದ್ದಾರೆ.
ಈಗಾಗಲೇ ಬೀಟ್ ವಹಿಸಿಕೊಂಡಿರುವ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಈ ಪೈಕಿ ಮಂಡ್ಯ ಪಶ್ಚಿಮ ಠಾಣೆಯ ಪೇದೆ ಪ್ರಭುಸ್ವಾಮಿ ಅವರು ವಿಶೇಷ ಸ್ಟಿಕ್ಕರ್ ಸಿದ್ಧಪಡಿಸಿ ಅದನ್ನು ತಮ್ಮ ವ್ಯಾಪ್ತಿಯ ಮನೆಗೆ ಅಂಟಿಸುತ್ತಿದ್ದಾರೆ. ಈ ಸ್ಟಿಕ್ಕರ್‌ನಲ್ಲಿರುವ ಅಂಶಗಳು ಗಮನ ಸೆಳೆಯುತ್ತಿವೆ.