

ಬೀರೂರು: ಸಾರ್ವಜನಿಕ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ವಿನೂತನವಾಗಿ ಆರಂಭಿಸಿರುವ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಸಂಜೆ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸಮಾಜದ ಸುರಕ್ಷತೆ ಹಾಗೂ ಸ್ವಾಸ್ಥ್ಯ ಕಾಪಾಡುವಲ್ಲಿ ಪೊಲೀಸರ ಪಾತ್ರ ಹಿರಿದು. ಸಮಾಜದಲ್ಲಿ ಅಪರಾಧ ಪ್ರಕರಣಗಳ ತಡೆಗೆ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಸಹಕಾರಿ ಎಂದರು.
ಸಿಪಿಐ ಶ್ರೀಕಾಂತ್ ಮಾತನಾಡಿ, ಈ ಹಿಂದೆ ತಮಗಾಗುವ ಸಮಸ್ಯೆಗಳನ್ನು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ ನಂತರ ಇಲಾಖೆ ಕ್ರಮ ಕೈಗೊಳ್ಳುತ್ತಿತ್ತು. ಆದರೆ ಇನ್ನು ಮುಂದೆ ಪೊಲೀಸರೇ ಸಾರ್ವಜನಿಕರ ಮನೆ ಮನೆಗೆ ಹೋಗಿ ಅಹವಾಲು ಆಲಿಸಲಿದ್ದಾರೆ. ಪೊಲೀಸರು ಮನೆಗೆ ಬಂದಾಗ ಅವರೊಂದಿಗೆ ನಿಮ್ಮ ದೂರುಗಳನ್ನು ತಿಳಿಸಬೇಕು ಎಂದರು.
ಪಿಎಸ್‌ಐ ತಿಪ್ಪೇಶ್ ಮಾತನಾಡಿ, ಸಮುದಾಯ ಪೊಲೀಸ್ ವ್ಯವಸ್ಥೆ ಬಲಪಡಿಸುವ ಹಿತದೃಷ್ಠಿಯಿಂದ ಮನೆ ಮನೆಗೆ ಪೊಲೀಸ್ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿದೆ. ಬೀಟ್ ಸಿಬ್ಬಂದಿಗಳು ಜನರಲ್ಲಿ ಸುರಕ್ಷತೆ ಸೈಬರ್ ಅಪರಾಧಗಳ ಅರಿವು ಮೂಡಿಸಲಾಗುವುದು. ಪೊಲೀಸ್ ಇಲಾಖೆ ನೆರವು ಪಡೆಯುವ ವಿಧಾನ ಸೇರಿದಂತೆ ಇಲಾಖೆ ಸಮಗ್ರ ಸೇವೆಗಳ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು ಎಂದರು
ಅಪರಾಧ ವಿಭಾಗದ ಪಿಎಸ್‌ಐ ಗಣಪತಿ ಆರ್.ಶೇರುಗಾರ್, ಎಎಸ್‌ಐ ನಾಗೇಗೌಡ, ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ವಾರ್ಡ್ ಸದಸ್ಯ ಮಾನಿಕ್ ಬಾಷಾ, ಪುರಸಭೆ ಸದಸ್ಯ ಬಿ.ಆರ್.ರವಿಕುಮಾರ್, ರಾಜು, ಮಧು ಬಾವಿಮನೆ, ಸಂತೋಷ್ ಕುಮಾರ್, ಹೇಮಂತ್, ಶೃತಿ, ಪಾಂಡುರಂಗಪ್ಪ, ಲತೇಶ, ಶಿವಾನಂದ್, ರಾಧಾ, ಬಾಬು, ಆಶಾ, ಇತರೆ ಪೊಲೀಸ್ ಸಿಬ್ಬಂದಿ ಇದ್ದರು.