ಮನೆ ಬಾಗಿಲಿನ ಬೀಗ ಒಡೆದು ಕಳವು

Robbery
Published on

ಕುಂದಾಪುರ: ಮನೆಯ ಬಾಗಿಲಿನ ಬೀಗ ಒಡೆದು ಮೊಬೈಲ್, ನಗದು ಕಳವು ಮಾಡಿದ ಬಾಲಕನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಅಂಪಾರು ಗ್ರಾಮದ ಅಕ್ಕಯ್ಯ ಎಂಬುವರು ತನ್ನ ಮಗಳೊಂದಿಗೆ ದಸರಾ ರಜೆ ಪ್ರಯುಕ್ತ ಅ.10ರಿಂದ 21ರವರೆಗೆ ತಾಯಿ ಮನೆಗೆ ತೆರಳಿದ್ದು, ವಾಪಸ್ ಅಂಪಾರು ಮನೆಗೆ ಬಂದು ನೋಡುವಾಗ ಕಳ್ಳರು ಮನೆಯ ಎದುರಿನ ಬಾಗಿಲಿನ ಬೀಗ ಒಡೆದು, ಕೋಣೆಯಲ್ಲಿ 5 ಡಬ್ಬದಲ್ಲಿದ್ದ 2500 ರೂ. ದೇವರ ಕಾಣಿಕೆ, ಟಿವಿ ಸ್ಟಾೃಂಡ್ ಮೇಲೆ ಇದ್ದ ಸುಮಾರು 8 ಸಾವಿರ ರೂ. ಮೌಲ್ಯದ 2 ಮೊಬೈಲ್ ಹಾಗೂ 1 ಮೊಬೈಲ್ ಚಾರ್ಜರ್ ಸಹಿತ ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಶಂಕರನಾರಾಯಣ ಠಾಣಾ ಪಿ.ಎಸ್.ಐ ನಾಸೀರ್ ಹುಸೇನ್ ಮತ್ತು ಶಂಭುಲಿಂಗಯ್ಯ ಹಾಗೂ ಸಿಬ್ಬಂದಿ ಈ ಕಳ್ಳತನ ನಡೆಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಆತನಿಂದ ಎರಡು ಮೊಬೈಲ್ ಪೋನ್, ನಗದು 2500 ರೂ., ಚಿನ್ನದಂತೆ ತೋರುವ ಸುಮಾರು 60 ಸಾವಿರ ರೂ. ಮೌಲ್ಯದ ಒಂದು ಜತೆ ಕಿವಿ ಓಲೆ, ಚಿನ್ನದಂತೆ ತೊರುವ ಸುಮಾರು 1700 ರೂ. ಮೌಲ್ಯದ ಮಗುವಿನ ಸಣ್ಣ ಕಿವಿ ಓಲೆ, ಚಿನ್ನದಂತೆ ತೊರುವ 11 ಸಾವಿರ ರೂ. ಮೌಲ್ಯದ ಉಂಗುರ, ಬೆಳ್ಳಿಯಂತೆ ತೋರುವ ಸುಮಾರು 3500 ರೂ. ಮೌಲ್ಯದ ದಪ್ಪ ಸರ, ಬೆಳ್ಳಿಯಂತೆ ತೋರುವ ಸಪೂರ ಸರ, ಬೆಳ್ಳಿಯಂತೆ ತೋರುವ ಉಂಗುರ ಮತ್ತು ಬೆಳ್ಳಿಯಂತೆ ತೋರುವ 5 ಕಾಲು ಉಂಗುರ ವಶಪಡಿಸಿಕೊಂಡಿದ್ದು, ಇದರ ಒಟ್ಟು ಸುಮಾರು 87,890 ಎಂದು ಅಂದಾಜಿಸಲಾಗಿದೆ. ಬಾಲಕನನ್ನು ಉಡುಪಿ ಬಾಲ ನ್ಯಾಯ ಮಂಡಳಿಯವರಲ್ಲಿ ಹಾಜರುಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net