ದೂಧ್‌ಸಾಗರ್ ಜಲಪಾತ ಬಳಿ ಭೂಕುಸಿತ ಘಟನೆ ಹಿನ್ನೆಲೆ: ಲೋಕೊ ಪೈಲಟ್‌ಗಳಿಗೆ ನಗದು ಬಹುಮಾನ

mam
Published on

ಮಂಗಳೂರು: ಗೋವಾದ ದೂಧ್‌ಸಾಗರ್ ಜಲಪಾತ ಬಳಿ ಭೂಕುಸಿತ ವೇಳೆ ಸಮಯಪ್ರಜ್ಞೆ ಮೆರೆದು ಭಾರಿ ಅಪಾಯ ತಪ್ಪಿಸಿದ ನಂ.01134 ಮಂಗಳೂರು ಸಿಎಸ್‌ಎಂಟಿ ಮುಂಬೈ ರೈಲಿನ ಲೋಕೊ ಪೈಲಟ್, ಸಹಾಯಕ ಲೋಕೊ ಪೈಲಟ್ ಹಾಗೂ ಗಾರ್ಡ್ ಅವರಿಗೆ ನೈಋತ್ಯ ರೈಲ್ವೆ ನಗದು ಬಹುಮಾನ ಘೋಷಿಸಿದೆ.

ಜು.23ರಂದು ಬೆಳಗ್ಗೆ 6.10ರ ಸುಮಾರಿಗೆ ಕುಲೇಂನಿಂದ ಕ್ಯಾಸಲ್ ರಾಕ್ ಕಡೆಗೆ ರೈಲು ಹೋಗುತ್ತಿತ್ತು. ದೂಧ್‌ಸಾಗರ್ ಸೋನಾಲಿಮ್ ಸೆಕ್ಷನ್ ಮಧ್ಯೆ ರೈಲು ಸಾಗುತ್ತಿದ್ದಾಗ ಭಾರಿ ಮಳೆಗೆ ಗುಡ್ಡದ ಕಡೆಯಿಂದ ಕೆಸರು ಮಣ್ಣು ಜಾರಿ ಹಳಿಗೆ ಬೀಳುವುದನ್ನು ಲೋಕೋ ಪೈಲಟ್ ರಂಜೀತ್ ಕುಮಾರ್ ಗಮನಿಸಿದರು. ಕೂಡಲೇ ತುರ್ತು ಬ್ರೇಕ್ ಹಾಕಿ ರೈಲನ್ನು ಸುರಕ್ಷಿತವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾದರು. ಆದರೂ ಹಳಿಯ ಮೇಲೆ ಕೆಸರು ಮಿಶ್ರಿತ ಕಲ್ಲುಬಂಡೆಗಳಿದ್ದ ಕಾರಣ ಇಂಜಿನ್ ಹಳಿ ತಪ್ಪಿತು. ಇದರ ನಡುವೆ ಗಾರ್ಡ್ ಶೈಲೇಂದ್ರ ಕುಮಾರ್ ಕೂಡ ಹ್ಯಾಂಡ್ ಬ್ರೇಕ್ ಹಾಕಿ ಬ್ರೇಕ್ ವ್ಯಾನ್ ನಿಲ್ಲಿಸಿದರು.

ಸಹಾಯಕ ಲೋಕೊ ಪೈಲಟ್ ಹಾಶಿದ್‌ಗೆ ಸೂಚನೆ ನೀಡಿ ಮುಂದೆ ಹಾಗೂ ಹಿಂದಿರುವ ಇಂಜಿನ್‌ಗಳನ್ನು ಹಿಂದಕ್ಕೆ ಸೆಳೆದದ್ದಲ್ಲದೆ ಮುಂದಿನ ಬೋಗಿಗಳಿಂದ ಪ್ರತ್ಯೇಕಿಸಿ ಅದರಲ್ಲಿದ್ದ 345 ಪ್ರಯಾಣಿಕರನ್ನು ಮರಳಿ ಕುಲೇಂ ಸ್ಟೇಷನ್‌ಗೆ ಕರೆತರುವಲ್ಲಿ ಯಶಸ್ವಿಯಾದರು. ಈ ಪ್ರಯತ್ನಕ್ಕೆ ನೈಋತ್ಯ ರೈಲ್ವೆಯ ಮಹಾಪ್ರಬಂಧಕ ಗಜಾನನ ಮಲ್ಯ ನಗದು ಬಹುಮಾನ ಪ್ರಕಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net