ಹಕ್ಕಿಜ್ವರದ ಬಗ್ಗೆ ಹೆಚ್ಚಿನ ಆತಂಕ ಬೇಡ, ಮಾರ್ಗಸೂಚಿ ಪಾಲಿಸಿ: ಜಿಲ್ಲಾಡಳಿತ ಸಲಹೆ

IMG-20250228-WA0016.jpg
Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರವನ್ನು ಹತೋಟಿಗೆ ತರಲು ಸೋಂಕು ಪೀಡಿತ ತಾಲೂಕಿನ ವರದಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಿಯಂತ್ರಣ ಕ್ರಮಗಳನ್ನು ಸಮರೋಪಾಧಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಜನರು ಹೆಚ್ಚಿನ ಆತಂಕಕ್ಕೆ ಒಳಗಾಗದೆ ಆರೋಗ್ಯ ಇಲಾಖೆಯ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಮನವಿ ಮಾಡಿದ್ದಾರೆ.
ಹಕ್ಕಿ ಜ್ವರ ನಿಯಂತ್ರಣದ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿ, ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ ಸೋಂಕು ನಿಯಂತ್ರಿಸುವ ಮೂಲಕ ರೋಗ ಬೇರೆಡೆಗೆ ಹರಡದಂತೆ ಹಲವು ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ವರದಹಳ್ಳಿಯಲ್ಲಿ ಸಾವನ್ನಪಿದ ಕೋಳಿಗಳಲ್ಲಿ ಹಕ್ಕಿಜ್ವರದ ಸೋಂಕು ಪತ್ತೆಯಾಗಿ ದೃಢಪಟ್ಟಿರುವ ಕಾರಣ ಈ ಗ್ರಾಮವನ್ನು ಕೇಂದ್ರವಾಗಿಸಿಕೊಂಡು ಸುತ್ತಲೂ 10 ಕಿ.ಮೀ ವ್ಯಾಪ್ತಿಯಲ್ಲಿ ಕೋಳಿ ಸಾಗಾಣಿಕೆ ಮೇಲೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ಹೊರಗಡೆಯಿಂದ ವರದಹಳ್ಳಿ ಸುತ್ತಮುತ್ತಲ ಗ್ರಾಮಗಳಿಗೆ ಕೋಳಿಗಳನ್ನು ತರದಂತೆ ನಾಕಾಬಂಧಿ ಹಾಕಲಾಗಿದೆ. ವರದಹಳ್ಳಿಯಲ್ಲಿನ ಕೋಳಿಗಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದ್ದು, ರೋಗ ನಿಯಂತ್ರಣದ ಮುಂಜಾಗ್ರತಾ ಕ್ರಮದ ಭಾಗವಾಗಿ ಅವುಗಳನ್ನೆಲ್ಲಾ ಸರ್ಕಾರದ ಮಾರ್ಗಸೂಚಿಯಂತೆ ಸಾಮೂಹಿಕವಾಗಿ ವಿಲೇವಾರಿ ಮಾಡಲು ಸೂಚಿಸಲಾಗಿದೆ. ಗ್ರಾಮದಲ್ಲಿನ ಕೋಳಿಗಳನ್ನು ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಇದುವರೆಗೆ ಗ್ರಾಮದ ಜನರಲ್ಲಿ ಯಾವುದೇ ಕೆಮ್ಮು, ಶೀತ, ನೆಗಡಿ, ಜ್ವರದಂತಹ ಪ್ರಕರಣಗಳು ಕಂಡುಬಂದಿಲ್ಲ. ಆದರೂ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ಪ್ರತಿ ಕುಟುಂಬದ ಆರೋಗ್ಯದ ಮೇಲೂ ನಿಗಾ ಇಡಲಾಗಿದೆ ಎಂದು ತಿಳಿಸಿದ್ದಾರೆ.
ವರದಹಳ್ಳಿಯ ಒಂದು‌ ಕಿ.ಮೀ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ಉಲ್ಬಣವಾಗಿ ಹೊರಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯ ಉಳಿದೆಡೆಗಳಲ್ಲಿ ಯಾವುದೇ ರೀತಿ ಸಮಸ್ಯೆ ಕಂಡು ಬರದ ಕಾರಣ ಸಾರ್ವಜನಿಕರು ಶುಚಿತ್ವವನ್ನೂ ಗಮನದಲ್ಲಿಟ್ಟುಕೊಂಡು ಆರೋಗ್ಯವಾಗಿರುವ ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿ ಎಂದಿನಂತೆ ತಿನ್ನಲು ಬಳಸಬಹುದು. ಯಾವುದೇ ರೀತಿಯ ಗೊಂದಲ, ಆತಂಕ ಬೇಡ. ರೋಗ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಮರೋಪಾದಿಯ ಕ್ರಮಗಳನ್ನು ಕೈಗೊಂಡಿದೆ. ಹೊರಗಿನಿಂದ ವಾಹನಗಳ ಮೂಲಕ ಜಿಲ್ಲೆಗೆ ಬರುವ ಕೋಳಿಗಳ ಮಾದರಿಗಳನ್ನೂ ಪರೀಕ್ಷೆಗೆ ಒಳಪಡಿಸಿ ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಆರೋಗ್ಯ ಇಲಾಖೆ, ಪಶುವೈದ್ಯಕೀಯ ಸೇವಾ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಸಭೆಗಳನ್ನು ಕಾಲಕಾಲಕ್ಕೆ ನಡೆಸಿ ಜಿಲ್ಲಾಡಳಿತ ವರದಿ ಪಡೆದು ನಂತರದ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ವರದಹಳ್ಳಿ ಗ್ರಾಮಕ್ಕೆ ಹಕ್ಕಿ ಸಾಗಾಣಿಕೆ ವಾಹನಗಳು ಹಾಗೂ ಹೊರಗಡೆಯಿಂದ ಕೋಳಿಗಳನ್ನು ಗ್ರಾಮಕ್ಕೆ ತರುವುದನ್ನು ನಿರ್ಬಂಧಿಸಲಾಗಿದೆ. ವಿಪತ್ತು ನಿರ್ವಹಾಣಾ ಕಾಯ್ದೆಯನ್ವಯ ಆದೇಶ ಹೊರಡಿಸಿ ಗ್ರಾಮದ ಒಂದು ಕಿಲೋಮೀಟರ್ ವ್ಯಾಪ್ತಿಯ ಸುತ್ತಮುತ್ತಲ ಕೋಳಿ ಸಾಗಾಣಿಕಾ ವಾಹನಗಳನ್ನು, ಕೋಳಿಗಳನ್ನು ತರುವುದನ್ನು ನಿರ್ಬಂಧಿಸಲಾಗಿದೆ ಜೊತೆಗೆ ವರದಹಳ್ಳಿಯಲ್ಲಿರುವ ಕೋಳಿಗಳನ್ನು ಸಾಮೂಹಿಕ ಹತ್ಯೆ ಮಾಡಿ ವೈರಸ್ ನಿಯಂತ್ರಣ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಸ್ವಚ್ಛತೆಯನ್ನು ಕಾಪಾಡಲು ಪಿಡಿಓಗೆ ನಿರ್ದೇಶನ ನೀಡಲಾಗಿದೆ ಹಾಗೂ ಪ್ರತಿದಿನದ ನಿಯಂತ್ರಣ ಕ್ರಮದ ವರದಿಯನ್ನು ಪಶು ಇಲಾಖೆಯ ಉಪ ನಿರ್ದೇಶಕರಿಂದ ಪಡೆದು ಕಾಲೋಚಿತವಾಗಿ ನಿಯಂತ್ರಣ ಕ್ರಮಗಳನ್ನು ಜರುಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net