ತಂದೆ-ತಾಯಿ ಮನಸು ನೋಯಿಸದಿರಿ

Naregal
Published on

ನರೇಗಲ್ಲ: ತಂದೆ-ತಾಯಿಗಳೇ ನಿಜವಾದ ದೇವರು. ಅವರ ಮನಸನ್ನು ನೋಯಿಸದಂತೆ ನೋಡಿಕೊಳ್ಳುವುದೇ ನಮ್ಮ ಕರ್ತವ್ಯ. ತಂದೆ-ತಾಯಿಗಳಿಗಿಂತ ಮಿಗಿಲಾದ ದೇವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ಆದ್ದರಿಂದ ತಂದೆ-ತಾಯಿಯನ್ನು ಪ್ರೀತಿಸಿ, ಗೌರವಿಸಿ ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ. ಎ. ಬಳಿಗೇರ ಹೇಳಿದರು.

ಪಟ್ಟಣದ ಶ್ರೀಅನ್ನದಾನೇಶ್ವರ ಮಂಟಪದಲ್ಲಿ ಹಾಲಕೆರೆ ಶ್ರೀಅನ್ನದಾನೇಶ್ವರ ಸಂಸ್ಥಾನ ಮಠದ ಅಕ್ಷರ ಭಾರತಿ ಪ್ರತಿಷ್ಠಾನ ಗದಗ ಹಾಗೂ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಶಿವಾನುಭವಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಯಿ ನಮ್ಮನ್ನು ಭೂಮಿಗೆ ತಂದರೆ, ತಂದೆ ಇಡೀ ಜಗತ್ತನ್ನು ನಮಗೆ ಪರಿಚಯಿಸುತ್ತಾನೆ. ತನಗೆ ಏನೇ ಇಲ್ಲದಿದ್ದರೂ ಹೆಂಡಿರು ಮಕ್ಕಳ ಸಲುವಾಗಿ ಆತ ಅಹರ್ನಿಶಿ ದುಡಿಯುತ್ತಾನೆ. ನಿಮ್ಮ ಭವಿಷ್ಯಕ್ಕಾಗಿ ತಂದೆ ತನ್ನದೆಲ್ಲವನ್ನೂ ತ್ಯಾಗ ಮಾಡಿ ನಿಮ್ಮನ್ನು ಸಮಾಜದಲ್ಲಿ ಒಬ್ಬ ದೊಡ್ಡ ವ್ಯಕ್ತಿಯನ್ನಾಗಿಸುತ್ತಾನೆ. ಹೀಗೆ ಸದಾಕಾಲ ನಿಮ್ಮ ಅಭ್ಯುದಯಕ್ಕಾಗಿಯೆ ದುಡಿದು, ನಿಮ್ಮ ಶ್ರೇಯಸ್ಸನ್ನು ಬಯಸುವ ತಂದೆ-ತಾಯಿಗಳ ಋಣವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ. ಆದ್ದರಿಂದ ತಂದೆ-ತಾಯಿಗಳೇ ನಿಮಗೆ ದೇವರೆಂದು ತಿಳಿದು ನಡೆದರೆ ನಿಮ್ಮ ಜೀವನ ಪಾವನವಾಗುತ್ತದೆ, ಭವಿಷ್ಯವು ಅತ್ಯಂತ ಚೆನ್ನಾಗಿರುತ್ತದೆ ಎಂದರು.

ಐ. ಬಿ. ಬೆನಕೊಪ್ಪ ಮಾತನಾಡಿ, ತಂದೆ-ತಾಯಿಯರನ್ನು ದೇವರಂತೆ ಪೂಜಿಸಿದರೆ ನಿಮ್ಮ ಬಾಳು ಬಂಗಾರವಾಗುತ್ತದೆ. ಮುಪ್ಪಿನ ಕಾಲದಲ್ಲಿ ಆಸರೆಯಾಗಿರಿ. ಕಿವಿಗಳಿಗೆ ಒಳ್ಳೆಯ ನುಡಿಗಳು ಬಿದ್ದಾಗ ಮನಸ್ಸು ಸಂತೋಷಿಸುತ್ತದೆ. ಮನಸ್ಸು ಸಂತೋಷಿಸಿದರೆ ಹೃದಯ ಅರಳುತ್ತದೆ. ಹೃದಯವರಳಿದರೆ ವ್ಯಕ್ತಿತ್ವ ತನ್ನಿಂದ ತಾನೆ ವಿಕಸಿತವಾಗುತ್ತದೆ. ಆದ್ದರಿಂದ ಎಂದಿಗೂ ಒಳ್ಳೆಯ ವಿಚಾರಗಳಿಗೆ ನಿಮ್ಮ ಮನಸ್ಸನ್ನು ತೆರೆದಿಡಿ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಎನ್. ಆರ್. ಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಲ್ಲಿಕಾರ್ಜುನಪ್ಪ ಮೆಣಸಗಿ, ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಇದ್ದರು. ಉಪನ್ಯಾಸಕಿ ರತ್ನಾ ಪಾಟೀಲ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net