

ಹಾಸನ: ಪಡಿತರ ಚೀಟಿದಾರರು ತಮ್ಮ ‘ಗುರುತಿನ ಮರುನೋಂದಣಿ’ (ಇ-ಕೆವೈಸಿ) ಮಾಡಿಸಲು ಮಾರ್ಚ್ ಅಂತ್ಯದವರೆಗೆ ಅವಧಿ ವಿಸ್ತರಿಸಿ ದ್ದು, ಸಾರ್ವಜನಿರು ಆತಂಕಪಡುವ ಅಗತ್ಯವಿಲ್ಲ.
ಮೂರು ತಿಂಗಳಿಂದ ನ್ಯಾಯ ಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಜಾರಿಯಲ್ಲಿದ್ದು ಜನವರಿ 10ರ ನಂತರ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ. ಆ ಬಳಿಕ ಬರುವ ನಾಗರಿಕರಿಗೆ ಪಡಿತರ ಸಿಗುವುದಿಲ್ಲ ಎಂಬ ಕಟ್ಟಪ್ಪಣೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿತ್ತು. ಒಂದು ದೇಶ ಒಂದು ಪಡಿತರ ಭಾಗವಾಗಿ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇ-ಕೆವೈಸಿ ಪ್ರಾರಂಭವಾಗಿದ್ದು, ಪಡಿತರ ಚೀಟಿದಾರರ ಮಾಹಿತಿ ಆನ್‌ಲೈನ್‌ಲ್ಲಿ ಸಿಗುವಂತಾಗಲು ಹಾಗೂ ರಾಜ್ಯದ ಯಾವುದೇ ಸ್ಥಳದಲ್ಲಿ ಬೇಕಾದರೂ ಪಡಿತರ ಪಡೆಯಲು ಅನುಕೂಲ ಕಲ್ಪಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇ-ಕೆವೈಸಿ ಸಂಗ್ರಹ ಆರಂಭಿಸಿದೆ.
ರಾಜ್ಯಾದ್ಯಂತ ಇದುವರೆಗೆ 53 ಲಕ್ಷ ಜನರು ಮಾತ್ರ ಮರು ನೋಂದಣಿಯಾ ಗಿದ್ದಾರೆ. ಸರ್ವರ್ ಸಮಸ್ಯೆ, ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಬರಬೇಕಿರುವುದು ಹಾಗೂ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಿಬ್ಬಂದಿ ಕೊರತೆ ಪರಿಣಾಮ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿರುವ ಕಾರಣ ಪ್ರಕ್ರಿಯೆಯನ್ನು ಮಾರ್ಚ್‌ವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ.
ಜಿಲ್ಲೆಯಲ್ಲಿ ಶೇ. 52 ರಷ್ಟು ಪೂರ್ಣ: ಹಾಸನ ಜಿಲ್ಲೆಯಲ್ಲಿ 4.53 ಲಕ್ಷ ಬಿಪಿಎಲ್ ಹಾಗೂ ಅಂತ್ಯೋದಯ, 23 ಸಾವಿರ ಎಪಿಎಲ್ ಫಲಾನುಭವಿಗಳಿದ್ದಾರೆ. ಆಲೂರು ತಾಲೂಕಿನಲ್ಲಿ ಶೇ. 46, ಅರಸೀಕೆರೆ ಶೇ. 53, ಅರಕಲಗೂಡು ಶೇ. 57, ಬೇಲೂರು ಶೇ. 51, ಚನ್ನರಾಯಪಟ್ಟಣ ಶೇ. 47, ಹಾಸನ ಶೇ. 57, ಹೊಳೆನರಸೀಪುರದಲ್ಲಿ ಶೇ. 53 ಹಾಗೂ ಸಕಲೇಶಪುರ ತಾಲೂಕಿನಲ್ಲಿ ಶೇ. 51 ರಷ್ಟು ಮರು ನೋಂದಣಿಯಾಗಿದೆ.
ಬಗೆಹರಿಯದ ಸರ್ವರ್ ಸಮಸ್ಯೆ: ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆ 7 ರಿಂದ ರಾತ್ರಿ 8ರವರೆಗೆ ಪಡಿತರ ಚೀಟಿದಾರರ ಮರು ನೋಂದಣಿಗೆ ಸೂಚಿಸಲಾಗಿದೆ. ಆದರೆ ಕೆಲವೆಡೆ ಸಿಬ್ಬಂದಿ ಬೆಳಗ್ಗೆ 10 ಗಂಟೆಗೆ ಬಂದು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇದರಿಂದ ಸರದಿ ಸಾಲಿನಲ್ಲಿ ನಿಲ್ಲುವ ಜನರ ಸಂಖ್ಯೆ ಹೆಚ್ಚುತ್ತಿದ್ದು, ಆಗಾಗ ಸರ್ವರ್ ಸಹ ಕೈ ಕೊಡುತ್ತಿದೆ. ಸರ್ವರ್ ಸಮಸ್ಯೆಯಾಗುತ್ತಿದ್ದಂತೆ ಮೈಸೂರಿನ ಐಟಿ ಸೆಲ್‌ಗೆ ತಿಳಿಸಿ ಸರಿಪಡಿ ಸಿಕೊಳ್ಳಬೇಕು. ಈ ಸಮಸ್ಯೆಯಿಂದಾಗಿ ದಿನಕ್ಕೆ ಅರ್ಧದಷ್ಟು ಕೆಲಸ ವಿಳಂಬವಾಗುತ್ತಿದೆ.
ಜನರಲ್ಲಿ ಹೆಚ್ಚಿದ ಆತಂಕ: ನ್ಯಾಯ ಬೆಲೆ ಅಂಗಡಿಗಳಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ ಪ್ರತಿ ತಿಂಗಳ 1 ರಿಂದ 10ರವರೆಗೆ ಇ-ಕೆವೈಸಿ ಹಾಗೂ ಉಳಿದ ದಿನ ಬೇರೆ ಕೆಲಸ ಮಾಡುವಂತೆ ಮೇಲಧಿಕಾರಿಗಳು ಸೂಚಿಸಿದ್ದರು. ಆದರೆ ನಿರೀಕ್ಷಿತ ಗುರಿ ತಲುಪದ ಕಾರಣ ಪ್ರಕ್ರಿಯೆಯನ್ನು ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ.
ತಿಂಗಳಿನ ಯಾವ ದಿನಗಳಲ್ಲಿ ಬೇಕಾದರೂ ಕುಟುಂಬ ಸಮೇತ ಭೇಟಿ ನೀಡಿ ಇ-ಕೆವೈಸಿಗೆ ಒಳಪಡಬಹುದು. ಆದರೆ ಪಡಿತರ ರದ್ದಾಗುತ್ತದೆ ಎಂಬ ಆತಂಕದಲ್ಲಿರುವ ಜನರು 10ನೇ ತಾರೀಖಿನ ಒಳಗೆ ಕೆಲಸ ಮುಗಿಸಿಕೊಳ್ಳಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಜನವರಿ 10ರ ಒಳಗೆ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡದಿದ್ದರೆ ತಾಲೂಕು ಕೇಂದ್ರಕ್ಕೆ ಹೋಗಬೇಕಾಗುತ್ತದೆ ಎಂಬ ಮಾತುಗಳು ಜನರನ್ನು ದಿಗಿಲುಗೊಳಿಸಿವೆ.
ಮಾರ್ಚ್‌ವರೆಗೆ ಇ-ಕೆವೈಸಿ ನಡೆಸುವಂತೆ ಸೂಚನೆ ಬಂದಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಕೆಲ ನ್ಯಾಯಬೆಲೆ ಅಂಗ ಡಿಗಳಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದು ತಕ್ಷಣವೇ ಸರಿಪಡಿಸಿಕೊಳ್ಳಲಾಗುತ್ತಿದೆ. ಜಿಲ್ಲಾದ್ಯಂತ ಇದುವರೆಗೆ ಶೇ. 52 ರಂದು ಮರು ನೋಂದಣಿ ಪೂರ್ಣಗೊಂಡಿದೆ.
ಪಿ. ಸವಿತಾ, ಆಹಾರ ಮತ್ತು ನಾಗರಿಕ ಇಲಾಖೆ ಉಪನಿರ್ದೇಶಕಿ
ಕೆಲಸ ಬಿಟ್ಟು ಕುಟುಂಬ ಸಮೇತ ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಸರ್ವರ್ ಸಮಸ್ಯೆಯ ನೆಪ ಹೇಳಿ ಸಿಬ್ಬಂದಿ ಗಂಟೆಗಟ್ಟಲೇ ಹೊರಗೆ ಹೋಗುತ್ತಾರೆ. ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ರದ್ದಾಗುತ್ತದೆ ಎಂಬ ಆತಂಕ ಕಾಡುತ್ತಿದೆ.
ಪರಮೇಶ್, ಸಕಲೇಶಪುರ ನಿವಾಸಿ.