ಹೃದಯಾಘಾತ.. ಬೇಡ ಅನಗತ್ಯ ಆತಂಕ

Hart 1
Published on

ಉಡುಪಿ ಜಿಲ್ಲಾ ಸರ್ಜನ್​ ಡಾ. ಎಚ್​. ಅಶೋಕ ಸಲಹೆ

ಜನರಿಗೆ ಶ್ರಮದಾಯಕ ಕೆಲಸಕ್ಕೆ ಕರೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಇತ್ತೀಚೆಗಿನ ದಿನಗಳಲ್ಲಿ ದಿಢೀರ್​ ಹೃದಯಾಘಾತ ಪ್ರಕರಣ ಹೆಚ್ಚುತ್ತಿರುವ ಕುರಿತು ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಆದರೆ, ಉಡುಪಿ ಜಿಲ್ಲೆಯಲ್ಲಿ ಹಠಾತ್​ ಹೃದಯಾಘಾತದಿಂದ ಸಾವಿನ ಪ್ರಕರಣ ಉಂಟಾಗಿಲ್ಲ. ಹೀಗಾಗಿ ಅನಗತ್ಯ ಆತಂಕಕ್ಕೆ ಒಳಗಾಗಬಾರದು ಎಂದು ಉಡುಪಿ ಜಿಲ್ಲಾ ಆಸ್ಪತ್ರೆಯ ಸರ್ಜನ್​ ಡಾ. ಎಚ್​. ಅಶೋಕ ಸಲಹೆ ನೀಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಪ್ರತಿ ತಿಂಗಳೂ ತುರ್ತು ಚಿಕಿತ್ಸಾ ವಿಭಾಗ ಅಥವಾ ವೈದ್ಯಕೀಯ ವಿಭಾಗದಲ್ಲಿ ಅಂದಾಜು 1,500 ಜನರು ಇಸಿಜಿ ಮಾಡಿಸಿಕೊಳ್ಳುತ್ತಾರೆ. ಈ ಸಂಖ್ಯೆ ಇತ್ತೀಚೆಗಿನ ದಿನಗಳಲ್ಲಿ ಏರಿಕೆಯೂ ಆಗಿಲ್ಲ. ಹಿಂದಿನ ಅಂಕಿ-ಅಂಶ ನೋಡಿದಾಗ ಇಸಿಜಿ ಮಾಡಿಸಿಕೊಳ್ಳುವವರ ಸಂಖ್ಯೆ ಯಥಾಸ್ಥಿತಿಯಲ್ಲಿಯೇ ಇದೆ ಎಂದು ವಿಜಯವಾಣಿಗೆ ತಿಳಿಸಿದ್ದಾರೆ.

ಐವರು ಸಾವು

Hart 2
ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ಐವರು ಮಾತ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ, ಅವರೆಲ್ಲರೂ ವೃದ್ಧರು ಹಾಗೂ ಹೃದಯ ಸಂಬಂಧಿ ಕಾಯಿಲೆ ಅಥವಾ ಇನ್ನಿತರ ಕಾಯಿಲೆಗಳಿಗೆ ಕೆಲ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇದು ಸುಶಿಕ್ಷಿತರ ಜಿಲ್ಲೆ ಆಗಿದ್ದರಿಂದ ಯಾರೂ ಹೃದಯಾಘಾತದ ವಿಚಾರವಾಗಿ ಆತಂಕಗೊಂಡಿಲ್ಲ. ಕರೊನಾ ಸಂದರ್ಭದಲ್ಲಿ ಪಡೆದಿದ್ದ ಕೋವಾಕ್ಸಿನ್​ ಅಥವಾ ಕೋವಿಶೀಲ್ಡ್​ ಲಸಿಕೆಯಿಂದ ಈಗ ಹೃದಯಾಘಾತ ಆಗುತ್ತಿದೆ ಎನ್ನುವುದು ವೈಜ್ಞಾನಿಕವಾಗಿ ಸಮಂಜಸವಲ್ಲ ಎಂದರು.

ಬದಲಾದ ಆಹಾರ ಪದ್ಧತಿ

ದಶಕದಿಂದ ಈಚೆಗೆ ಜನರ ಜೀವನ ಶೈಲಿ ಹಾಗೂ ಆಹಾರ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಕೋವಿಡ್​ ಸಂದರ್ಭದಲ್ಲಿ ಹಾಗೂ ಅದರ ಬಳಿಕ ನೌಕರಸ್ಥರು ದೈಹಿಕ ಶ್ರಮ ಪಡುತ್ತಿಲ್ಲ. ವ್ಯಾಯಾಮ ಮಾಡುತ್ತಿಲ್ಲ. ಸಾಫ್ಟ್ ವೇರ್​ ಕಂಪನಿಯ ಉದ್ಯೋಗಿಗಳಂತೂ ಕುಳಿತಲ್ಲೇ ಕೆಲಸ ಅಥವಾ ವರ್ಕ್​ ಫ್ರಂ​ ಹೋಮ್​ ಕೆಲಸಕ್ಕೆ ಸೀಮಿತರಾಗಿದ್ದಾರೆ. ಮುಖ್ಯವಾಗಿ ಯುವ ಸಮುದಾಯ ಸರಿಯಾಗಿ ನಿದ್ದೆಯನ್ನೂ ಮಾಡುತ್ತಿಲ್ಲ. ಜಂಕ್​ ಫುಡ್​ಗಳನ್ನೇ ಹೆಚ್ಚು ಸೇವಿಸುತ್ತಿದ್ದಾರೆ. ಬದಲಾದ ಈ ಪದ್ಧತಿಯಿಂದ ಹೃದಯಾಘಾತಕ್ಕೆ ಕಾರಣ ಆಗುತ್ತಿರಬಹುದು ಎಂದರು.

ಜಾಗೃತಿಗೆ ಎನ್​ಸಿಡಿ ಕಾರ್ಯಕ್ರಮ

ಜನರಲ್ಲಿ ಆರೋಗ್ಯ ಜಾಗೃತಿ ಮಾಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಎನ್​ಸಿಡಿ (ನಾನ್​ ಕಮ್ಯುನಿಕೇಬಲ್​ ಡಿಸೀಸ್​) ಕಾರ್ಯಕ್ರಮ ಆಯೋಜಿಸಿದ್ದೇವೆ. ಅದಕ್ಕೆಂದೇ ತಜ್ಞರ ತಂಡ ರಚಿಸಲಾಗಿದೆ. ಇದು ಕೇವಲ ಜಿಲ್ಲಾ ಆಸ್ಪತ್ರೆಯಲ್ಲಷ್ಟೇ ಅಲ್ಲದೆ, ಬ್ಯಾಂಕ್​, ಫಿಶಿಂಗ್​ ಫ್ಯಾಕ್ಟರಿ, ಹೆಚ್ಚು ಕಾರ್ಮಿಕರಿರುವ ಪ್ರದೇಶ, ಗ್ರಾಮೀಣ ಪ್ರದೇಶ ಮುಂತಾದೆಡೆ ಎನ್​ಜಿಒ ಅಥವಾ ಸಂಘ-ಸಂಸ್ಥೆಗಳ ಮೂಲಕ ಆರೋಗ್ಯದ ಕುರಿತಾಗಿ ತಿಳಿವಳಿಕೆ ನೀಡಲಾಗುತ್ತಿದೆ ಎಂದು​ ಡಾ. ಎಚ್​. ಅಶೋಕ ತಿಳಿಸಿದ್ದಾರೆ.

ಪಾಲಕರು ಮಕ್ಕಳಿಗೆ ಮನೆಯಲ್ಲಿ ಎಂಡ್ರಾಯ್ಡ್​ ಮೊಬೈಲ್​ ಬಳಸಲು ಅವಕಾಶ ನೀಡಬಾರದು. ಲೌಡ್​ ಸ್ಪೀಕರ್​ ಹಾಕಿಕೊಂಡು ನಿರಂತರವಾಗಿ ಮೊಬೈಲ್​ ವೀಕ್ಷಿಸುವುದು ಒಳ್ಳೆಯದಲ್ಲ. ಅದರಿಂದ ಕಣ್ಣು ಹಾಗೂ ಮಿದುಳಿನ ಮೇಲೆ ಭಾರಿ ದುಷ್ಪರಿಣಾಮ ಉಂಟಾಗುತ್ತದೆ. ಈ ಕುರಿತು ಐಸಿಎಂಆರ್​ ತಜ್ಞರ ತಂಡವೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ. 40 ವಯಸ್ಸು ದಾಟಿದವರು 6 ತಿಂಗಳಿಗೆ ಒಮ್ಮೆಯಾದರೂ ಹೃದಯವೂ ಸೇರಿದಂತೆ ದೇಹದ ಇನ್ನಿತರ ಅಗಾಂಗಳ ಕುರಿತು ತಪಾಸಣೆ ಮಾಡಿಸಿಕೊಂಡರೆ ವಿನಾಕಾರಣ ಆತಂಕಗೊಳ್ಳುವ ಸಂದರ್ಭ ಬರುವುದಿಲ್ಲ. | ಡಾ.ಎಚ್​.ಅಶೋಕ. ಉಡುಪಿ ಜಿಲ್ಲಾ ಸರ್ಜನ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net