ಲಸಿಕೆ ವಿಳಂಬ ಆತಂಕ ಬೇಡ, 6ರಿಂದ 8 ವಾರದವರೆಗೂ ಪಡೆಯಬಹುದು

Covid
Published on

ಮಂಗಳೂರು: ಲಸಿಕೆಯ ಪ್ರಥಮ ಡೋಸ್ ಪಡೆದ ಬಳಿಕ 6ರಿಂದ 8 ವಾರದ ನಂತರವೂ ದ್ವಿತೀಯ ಡೋಸ್ ಪಡೆಯಬಹುದು. ಜನರು ಗಾಬರಿಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.

ಕೋವ್ಯಾಕ್ಸಿನ್ ಪೂರೈಕೆ ಸೀಮಿತವಾಗಿದ್ದು, ದ.ಕ ಜಿಲ್ಲೆಯಲ್ಲಿ ಸದ್ಯ ಸ್ಟಾಕ್ ಇಲ್ಲ. ಸ್ಟಾಕ್ ಬಂದಾಗ ಲಸಿಕೆ ಹಾಕಿಸುವವರಿಗೆ ಮಾಹಿತಿ ನೀಡಲಾಗುವುದು. ಕೋವಿಶೀಲ್ಡ್ ದ್ವಿತೀಯ ಡೋಸ್ ಹಾಕಿಸುವವರಿಗೂ, ಲಸಿಕೆ ಲಭ್ಯತೆ ಆಧಾರದಲ್ಲಿ ಕೇಂದ್ರಗಳಿಗೆ ಬರಲು ನಾವೇ ಕರೆ ಮಾಡಲಿದ್ದೇವೆ. ಆರೋಗ್ಯ ಇಲಾಖೆಗಳಿಂದಲೇ ಮಾಹಿತಿ ನೀಡಲಾಗುವುದು. ಪ್ರಥಮ ಡೋಸ್‌ನವರಿಗೆ ಸ್ಥಳದಲ್ಲೇ ನೋಂದಣಿಗೆ ಅವಕಾಶವಿಲ್ಲ. ಕಡ್ಡಾಯವಾಗಿ ಆನ್‌ಲೈನ್ ನೋಂದಣಿ ಮಾಡಿಸಿ, ಅಪಾಯಿಂಟ್‌ಮೆಂಟ್ ತೆಗೆದುಕೊಂಡೇ ಬರಬೇಕು ಎಂದು ಅವರು ತಿಳಿಸಿದ್ದಾರೆ.

ಇನ್ನೊಂದೆಡೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಲಸಿಕೆ ಹಾಕಿಸಿಕೊಳ್ಳಲು ಬರುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಆದರೆ ಸದ್ಯ ಲಸಿಕೆಗಳ ಕೊರತೆಯಿಂದಾಗಿ ಈಗಾಗಲೇ ಪ್ರಥಮ ಡೋಸ್ ಪಡೆಯುವವರಿಗೆ ಜಿಲ್ಲಾಡಳಿತ ಆನ್‌ಲೈನ್ ನೋಂದಣಿ ಕಡ್ಡಾಯಗೊಳಿಸಿದೆ.
ಇದರಿಂದಾಗಿ ಈಗಾಗಲೇ ಪ್ರಥಮ ಡೋಸ್ ಹಾಕಿಸಿಕೊಂಡು ನಾಲ್ಕೈದು ವಾರ ಕಳೆದಿರುವವರು ಲಸಿಕಾ ಕೇಂದ್ರಗಳಿಗೆ ಆಗಮಿಸಿ ಹಿಂತಿರುಗುವಂತಾಗಿದೆ. ವೆನ್ಲಾಕ್‌ನಲ್ಲಿ ಭಾನುವಾರ ಕೂಡ ಪ್ರಥಮ ಡೋಸ್ ಪಡೆದವರು ದ್ವಿತೀಯ ಡೋಸ್‌ಗಾಗಿ ಬಂದು ಲಸಿಕೆ ಇಲ್ಲ ಎಂದಾಗ ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ವಾಪಸಾದ ಘಟನೆ ನಡೆದಿದೆ.

ದ.ಕ. 996 ಕರೊನಾ ಪ್ರಕರಣ
ಧರ್ಮಸ್ಥಳ, ಬಂಟ್ವಾಳ, ಮಂಗಳೂರು, ಬೆಳ್ತಂಗಡಿ ಸಹಿತ 7 ಕಟೇನ್ಮೆಂಟ್ ಜೋನ್

ದ.ಕ.ಜಿಲ್ಲೆಯಲ್ಲಿ ಭಾನುವಾರ 2 ಸಾವು ಸಹಿತ 996 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದೆ.
ಒಟ್ಟು ಪ್ರಕರಣ ಸಂಖ್ಯೆ 47,038ಕ್ಕೇರಿದ್ದರೆ ಸಕ್ರಿಯ ಪ್ರಕರಣಗಳು 7595 ತಲಪಿವೆ. ಒಟ್ಟು ಸಾವಿನ ಸಂಖ್ಯೆ 760ಕ್ಕೇರಿದ್ದರೆ ಭಾನುವಾರ ಕೊವಿಡ್‌ನಿಂದ ಮುಕ್ತರಾದವರು 413.

ಒಟ್ಟು 7 ಕಂಟೇನ್ಮೆಂಟ್ ಜೋನ್‌ಗಳನ್ನು ಮಾಡಲಾಗಿದೆ. ಧರ್ಮಸ್ಥಳ, ಬಂಟ್ವಾಳ ಹಾಗೂ ಮಂಗಳೂರಿನಲ್ಲಿ ತಲಾ 2 ಹಾಗೂ ಬೆಳ್ತಂಗಡಿಯಲ್ಲಿ 1 ಸೇರಿದೆ. ಮಂಗಳೂರು ಸುರತ್ಕಲ್ ಸಮೀಪದ ಹೊಸಬೆಟ್ಟುವಿನಲ್ಲಿರುವ ವೃದ್ಧಾಶ್ರಮದಲ್ಲಿ ಸೋಂಕು ಪ್ರಕರಣ ಕಾಣಿಸಿಕೊಂಡಿದೆ. ಇಲ್ಲಿರುವ 20 ನಿವಾಸಿಗಳ ಪೈಕಿ 8 ಮಂದಿ ಪಾಸಿಟಿವ್ ಆಗಿದ್ದಾರೆ. ಅವರಲ್ಲಿ ಗಂಭೀರ ಸಮಸ್ಯೆ ಇರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿದ್ದು, ಉಳಿದವರಿಗೆ ಅಲ್ಲಿಯೇ ಇರಲು ಅವಕಾಶ ನೀಡಲಾಗಿದೆ. 12 ಮಂದಿ ಪ್ರಾಥಮಿಕ ಸಂಪರ್ಕದವರನ್ನು ಪ್ರತ್ಯೇಕಿಸಲಾಗಿದೆ.

ಇನ್ನು ಧರ್ಮಸ್ಥಳದ 10 ಗುಂಪು ಮನೆಗಳಲ್ಲಿ 17 ಪಾಸಿಟಿವ್ ಕೇಸ್ ಬಂದಿದ್ದು, ಹತ್ತಿರ ಹತ್ತಿರ ಇರುವುದರಿಂದ ಅವುಗಳನ್ನು ಸೇರಿಸಿ ಕಂಟೇನ್ಮೆಂಟ್ ಜೋನ್ ಮಾಡಲಾಗಿದೆ. ಬಂಟ್ವಾಳದ ಕಡೇಶ್ವಾಲ್ಯ(11 ಪ್ರಕರಣ), ಕುಕ್ಕಿಲ(10), ಮಂಗಳೂರಿನ ಜೆಪ್ಪಿನಮೊಗರು(7), ಧರ್ಮಸ್ಥಳದ ಪೊಸವಳಿಕೆ(6), ಶಿಶಿಲದಲ್ಲಿ(6) ಕಂಟೇನ್ಮೆಂಟ್ ಜೋನ್ ಮಾಡಲಾಗಿದೆ.

2500 ಕೊವಿಶೀಲ್ಡ್ ಮಾತ್ರ: ಜಿಲ್ಲೆಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಬರಲು ಬಾಕಿ ಇದೆ. ಸದ್ಯ 2500 ಲಸಿಕೆಗಳಷ್ಟೇ ಇವೆ. ಭಾನುವಾರ ಒಟ್ಟು 508 ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರೆಮ್‌ಡಿಸಿವಿರ್‌ಗೆ ಆನ್‌ಲೈನ್ ಬೇಡಿಕೆ ಹಾಕಿ: ಸರ್ಕಾರ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುವಾಗುವಂತೆ ರೆಮ್‌ಡೆಸಿವಿರ್ ಮತ್ತು ಆಮ್ಲಜನಕ ಅಗತ್ಯವಿರುವ ರೋಗಿಗೆ ದೊರಕುವಂತಾಗಲು ಎಲ್ಲ ಖಾಸಗಿ ಆಸ್ಪತ್ರೆಗಳೂ ಕೆಪಿಎಂಇ ಪೋರ್ಟಲ್(ಞಛಿ.ಚ್ಟ್ಞಠಿ.ಜಟ.ಜ್ಞಿ)ನಲ್ಲಿ ನೋಂದಣಿ ಮಾಡಲು ಸೂಚನೆ ನೀಡಿದೆ. ನೋಂದಣಿ ಮಾಡಿ ಪ್ರತಿ ದಿನ ರೋಗಿಗಳ ಎಸ್‌ಆರ್‌ಎಫ್ ಐಡಿಯೊಂದಿಗೆ ಆನ್‌ಲೈನ್‌ನಲ್ಲಿ ಔಷಧಕ್ಕೆ ಬೇಡಿಕೆ ಸಲ್ಲಿಸಬೇಕು. ನೋಂದಣಿ ಆಗದ ಆಸ್ಪತ್ರೆಗಳು ರೆಮ್‌ಡೆಸಿವಿರ್ ಔಷಧ ಮತ್ತು ಆಮ್ಲಜನಕಕ್ಕೆ ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸಲು ಸಾಧ್ಯವಿಲ್ಲ. ಅಂತಹ ಆಸ್ಪತ್ರೆಗಳಿಗೆ ಪೂರೈಸಲೂ ಆಗುವುದಿಲ್ಲ. ರೋಗಿಗಳು, ವಿವಿಧ ಸಂಘ ಸಂಸ್ಥೆಗಳಿಂದ ನೇರವಾಗಿ ರೆಮ್‌ಡಿಸಿವಿರ್ ಔಷಧ ಬೇಡಿಕೆ ಬಂದರೆ ಪರಿಗಣಿಸುವುದಿಲ್ಲ. ವೆಬ್‌ಲಿಂಕ್ ಮೂಲಕ ಬೇಡಿಕೆ ಸಲ್ಲಿಸಿದರೆ ಮಾತ್ರ ಸರಬರಾಜು ಎಂದು ಪ್ರಕಟಣೆ ತಿಳಿಸಿದೆ.

ಬೆಡ್ ಮೀಸಲು: ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆ ಕೊರತೆ ಆಗದಂತೆ ಮುಂಜಾಗ್ರತೆ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಶೇ 50 ಹಾಗೂ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಶೇ 75ರಷ್ಟು ಬೆಡ್‌ಗಳನ್ನು ಕಾದಿರಿಸಲಾಗಿದೆ. ಈ ಕೆಳಗಿನ ಆಸ್ಪತ್ರೆಗಳಲ್ಲಿ ಕೋವಿಡ್ ಸಂಬಂಧಿ ಸಮಸ್ಯೆಗಳಿದ್ದರೆ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿದೆ. ಉಳ್ಳಾಲ ಸಹರಾ ಆಸ್ಪತ್ರೆ(ನಿರಂಜನ್, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು, 9591225763), ತೇಜಸ್ವಿನಿ ಆಸ್ಪತ್ರೆ ಕದ್ರಿ(ಪ್ರವೀಣ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕರು 9449258204)

653 ಮಂದಿಗೆ ಪಾಸಿಟಿವ್: ಉಡುಪಿ: ಜಿಲ್ಲೆಯಲ್ಲಿ ಭಾನುವಾರ 653 ಮಂದಿಗೆ ಕರೊನಾ ದೃಢಪಟ್ಟಿದೆ. ಸೋಂಕಿತರಲ್ಲಿ 347 ಮಂದಿ ಉಡುಪಿ, 200 ಮಂದಿ ಕುಂದಾಪುರ, 104 ಮಂದಿ ಕಾರ್ಕಳ ತಾಲೂಕಿನವರಿದ್ದಾರೆ. 2 ಮಂದಿ ಹೊರ ಜಿಲ್ಲೆಯವರು. ಇವರಲ್ಲಿ 273 ಮಂದಿ ರೋಗ ಲಕ್ಷಣ ಹೊಂದಿದ್ದಾರೆ. 22 ಮಂದಿ ಕೋವಿಡ್ ಅಸ್ಪತ್ರೆಯಲ್ಲಿ ಹಾಗೂ 631 ಮಂದಿ ಹೋಂ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 788 ಮಂದಿ ಗುಣವಾಗಿದ್ದಾರೆ. ಸಕ್ರಿಯ ಪ್ರಕರಣ ಸಂಖ್ಯೆ 2508ಕ್ಕೆ ಇಳಿದಿದೆ.

ಕಾಸರಗೋಡಲ್ಲಿ 566 ಕೇಸ್: ಕಾಸರಗೋಡು: ಜಿಲ್ಲೆಯ 566 ಮಂದಿ ಸೇರಿ ಕೇರಳದಲ್ಲಿ ಭಾನುವಾರ 31,959 ಮಂದಿಗೆ ಕೋವಿಡ್ ದೃಢಪಟ್ಟಿದೆ. 49 ಮಂದಿ ಸಾವಿಗೀಡಾಗಿದ್ದು, ಇದುವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 5,405ಕ್ಕೇರಿದೆ. ಭಾನುವಾರ 16,296 ಮಂದಿ ಗುಣವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net