

ಮಡಿಕೇರಿ: ವನ್ಯ ಪ್ರಾಣಿಗಳಿಂದ ತಯಾರಿಸಿದ ವಸ್ತುಗಳ ಬಳಕೆಗೆ ಇರುವ ನಿಷೇಧದ ಬಗ್ಗೆ ಕೊಡಗಿನ ಜನತೆಗೆ ಆತಂಕ ಬೇಡ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು.
ವಿಧಾನ ಸಭೆಯ ಮೊಗಶಾಲೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪೊನ್ನಣ್ಣ, ಅರಣ್ಯ ಇಲಾಖೆಯು ಇಂತಹ ವಸ್ತುಗಳನ್ನು ಹಿಂದುರಿಗಸಲು ದಿನ ನಿಗದಿ ಪಡಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದು ಇದರಿಂದ ಕೊಡಗಿನ ಜನತೆಗೆ ತೊಂದರೆಯಾಗಲಿದೆ. ಕೊಡಗಿನಲ್ಲಿ ಪಾರಂಪರಿಕವಾಗಿ ಮತ್ತು ಸಾಂಪ್ರಾದಾಯಿಕವಾಗಿ ಐನ್ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಹಾಗೂ ಪೀಚೆ ಕತ್ತಿ ಮುಂತಾದ ಆಭರಣಗಳಲ್ಲಿ ತಲತಲಾಂತರದಿಂದ ವನ್ಯ ಜೀವಿಯ ಉತ್ಪನ್ನಗಳನ್ನು ಬಳಕೆ ಮಾಡಲಾಗಿದೆ. ಇವುಗಳ ರಕ್ಷಣೆಯ ಜವಾಬ್ದಾರಿ ತಮ್ಮ ಮೇಲಿದ್ದು ವಿಚಾರವನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರ ಗಮನಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರದ ಮಟ್ಟದಲ್ಲಿ ಪರಿಹಾರ ಸಿಗದೇ ಇದ್ದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಪರಿಹಾರ ಒದಗಿಸಲು ತಾವು ಬದ್ದರಿದ್ದು ಯಾರು ಕೂಡ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಎ.ಎಸ್.ಪೊನ್ನಣ್ಣ ಭರವಸೆ ನೀಡಿದರು.