

ಹುಬ್ಬಳ್ಳಿ: ಮಾದಕ ವ್ಯಸನದ ಬಗ್ಗೆ ಶಬ್ದವೇದಿ ಸಿನಿಮಾದಲ್ಲಿ ಅಪ್ಪಾಜಿ ಅವರು ಸಾಕಷ್ಟು ಜಾಗೃತಿ ಮೂಡಿಸಿದ್ದಾರೆ. ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದು. ಪ್ರತಿಯೊಬ್ಬ ವಿದ್ಯಾರ್ಥಿ ಬಗೆಗೆ ಪಾಲಕರು ನೂರಾರು ಕನಸು ಕಟ್ಟಿಕೊಂಡಿರುತ್ತಾರೆ. ಹೀಗಾಗಿ ಇಂತಹ ಕೆಟ್ಟ ನಶೆಗೆ ಅಂಟಿಕೊಂಡು ದಾರಿ ತಪ್ಪಿ ಜೀವನ ಕಳೆದುಕೊಳ್ಳುವುದಕ್ಕಿಂತ, ಒಳ್ಳೆಯ ನಶೆ ಅಳವಡಿಸಿಕೊಂಡು ಉತ್ತಮ ಜೀವನಕಟ್ಟಿಕೊಳ್ಳಬೇಕು ಎಂದು ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ ಅವರು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದರು.
ಹು-ಧಾ ಪೊಲೀಸ್ ಆಯುಕ್ತಾಲಯ ಹಾಗೂ ಕೆಎಲ್‌ಇ ತಾಂತ್ರಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಇಲ್ಲಿಯ ವಿದ್ಯಾನಗರದ ಬಿವಿಬಿ ಕಾಲೇಜ್ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾದಕ ವಸ್ತುಗಳ ನಿರ್ಮೂಲನಾ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಓದುವ, ಬರೆಯುವ, ಒಳ್ಳೆಯವರ ಸಂಗ ಮಾಡುವ ನಶೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ದೇಹ ಹಾಳು ಮಾಡುವ ನಶೆಯನ್ನಲ್ಲ.
ನಮ್ಮ ಜನನ ದೇವರು ಕೊಟ್ಟ ಕೊಡುಗೆ. ಅದನ್ನು ಕಾಪಾಡಿಕೊಳ್ಳೋಣ ಎಂದರು.
ಪ್ರತಿ ಅಭಿಮಾನಿಯನ್ನು ನಾನು ಸ್ನೇಹಿತರಾಗಿ ನೋಡುತ್ತೇನೆ. ಕೆಎಲ್‌ಇ ಕಾಲೇಜಿಗೆ ಬಂದಿದ್ದು, ಖುಷಿ ಆಗುತ್ತಿದೆ. ನನಗೀಗ 62 ವರ್ಷ ವಿದ್ಯಾಥಿಗಳನ್ನು ನೋಡಿದಾಗ 26 ವರ್ಷ ಎನಿಸುತ್ತದೆ. ಹುಬ್ಬಳ್ಳಿಗೆ ಬಂದಾಗ ಕಾಲೇಜ್ ಕಾರ್ಯಕ್ರಮ ಮಿಸ್ ಮಾಡಲ್ಲ. ‘ಆನಂದ’ ಚಲನಚಿತ್ರ ರಿಲೀಸ್ ಆದಾಗ ಕೂಡ ಕಾಲೇಜಿಗೆ ಬಂದಿದ್ದೆ. ವಿದ್ಯಾರ್ಥಿಗಳನ್ನು ನೋಡಿದಾಗ ನನ್ನ ಕಾಲೇಜ್ ದಿನಗಳು ನೆನಪಾಗುತ್ತಿವೆ ಎಂದು ಸ್ಮರಿಸಿದರು.
ಗೀತಾ ಶಿವರಾಜಕುಮಾರ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಸಹ ಕುಲಾಧಿಪತಿ ಡಾ. ಅಶೋಕ ಶೆಟ್ಟರ್, ಉಪ ಕುಲಪತಿ ಪ್ರೊ. ಅಶೋಕ ತೇವರಿ, ಡಾ. ಸಂಜಯ ಕೊಟಬಾಗಿ, ಡಾ.ಎಂ.ಆರ್. ಪಾಟೀಲ, ಡಾ. ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಶಿವಾನಂದ ಮುತ್ತಣ್ಣವರ, ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಇತರರು ಇದ್ದರು.
ಶಿವಣ್ಣ ಸ್ಟೆಪ್‌ಗೆ ಕುಣಿದ ವಿದ್ಯಾರ್ಥಿಗಳು: ಡಾ. ಶಿವರಾಜಕುಮಾರ ವೇದಿಕೆ ಮೇಲೆ ಟಗರು ಚಲನಚಿತ್ರದ ‘ಟಗರು ಬಂತು ಟಗರು’ ಹಾಡಿಗೆ ಡ್ಯಾನ್ಸ್ ಮಾಡಿದಾಗ ವಿದ್ಯಾರ್ಥಿಗಳು ಕೂಡ ಕುಣಿದರು. ಇದಕ್ಕೂ ಮೊದಲು ಶಿವಣ್ಣ, ‘ಯಾರೇ ಕೂಗಾಡಲಿ, ಊರೇ ಹೋರಾಡಲಿ’, ‘ಮುತ್ತಣ್ಣ ಪೀಪಿ ಊದುವ, ಮುತ್ತಣ್ಣ ಡೋಲು ಬಡಿಯುವ’, ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ’ ಹಾಡು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.