

ಕೆ.ಎಂ.ದೊಡ್ಡಿ: ಭಾರತ ಸ್ವಾತಂತ್ರ್ಯ ಗಳಿಸಲು ಹೋರಾಡಿದ ಅನೇಕ ವೀರರ ಶ್ರಮವನ್ನು ವ್ಯರ್ಥಗೊಳಿಸದೆ ನಾವು ಶೈಕ್ಷಣಿಕ ಕಲಿಕೆ ಮೂಲಕ ದೇಶವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯಬೇಕು ಎಂದು ಭಾರತಿ ಪಿಯು ಕಾಲೇಜಿನ ಉಪನ್ಯಾಸಕಿ ಸಿ.ಸುಮಿತ್ರಾ ಹೇಳಿದರು.
ಇಲ್ಲಿನ ಸ್ನೇಹ ವಿದ್ಯಾಸಂಸ್ಥೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ದೇಶ, ಭಾಷೆಯ ಮೇಲೆ ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಮನವರಿಕೆ ಮಾಡಿಕೊಡಬೇಕು ಎಂದರು.
ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಗೆದ್ದ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು. ಶಾಲಾ ಹಂತದಲ್ಲಿ ನಡೆದ ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ ಸ್ಪರ್ಧೆ ಹೀಗೆ ಹಲವಾರು ಸ್ಪರ್ಧೆಗಳಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಜತೆಗೆ ವಿವಿಧ ವೇಷಭೂಷಣವನ್ನು ಹಾಕಿದ ಮಕ್ಕಳಿಗೂ ಬಹುಮಾನ ನೀಡಲಾಯಿತು. ಮಕ್ಕಳು ವಿವಿಧ ದೇಶಭಕ್ತಿ ಹಾಡುಗಳಿಗೆ ನೃತ್ಯವನ್ನು ಮಾಡಿ ರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಸಂಸ್ಥಾಪಕ ದಾಸೇಗೌಡ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ದಾಸೇಗೌಡ, ಮುಖ್ಯ ಶಿಕ್ಷಕ ರವಿಶಂಕರ್, ಶಿಕ್ಷಕರಾದ ಸ್ವರೂಪಾ, ಶ್ವೇತಾ, ಮಮತಾ, ರಶ್ಮಿ, ರೂಪಿಣಿ, ಉಷಾರಾಣಿ ಇತರರು ಇದ್ದರು.
ಜ್ಞಾನಮುದ್ರ ವಿದ್ಯಾ ಮಂದಿರದಲ್ಲಿ ಆಚರಣೆ
ಮೆಣಸಗೆರೆ ಗ್ರಾಮದಲ್ಲಿರುವ ಜ್ಞಾನಮುದ್ರ ವಿದ್ಯಾ ಮಂದಿರ ಶಾಲೆಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ನಿವೃತ್ತ ಯೋಧ ವಿ.ಸಿ. ವೆಂಕಟರಾಮು ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ದೇಶದ ರಕ್ಷಣೆಯಲ್ಲಿ ಯೋಧರ ಪಾತ್ರ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಮಹಾನ್ ನಾಯಕರನ್ನು ಸ್ಮರಿಸಿದರು. ಜತೆಗೆ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ಹುತಾತ್ಮರಾದ ನಾಯಕರು ಹಾಗೂ ಸ್ವಾತಂತ್ರ್ಯ ಇತಿಹಾಸದ ಕೆಲವು ಘಟನೆಗಳನ್ನು ಕುರಿತು ವಿವರಿಸಿದರು.
ಸಂಸ್ಥೆಯ ಅಧ್ಯಕ್ಷೆ ಡಾ.ಸೌಮ್ಯಾರಾಜೇಶ್, ಕಾರ್ಯದರ್ಶಿ ಶಿವಮ್ಮ ಶಿವಕುಮಾರ್, ಟ್ರಸ್ಟಿ ತೇಜಸ್ವಿನಿ ತಿಪ್ಪಾರೆಗೌಡ, ಆಡಳಿತ ಅಧಿಕಾರಿ ಪ್ರಭಾವತಿ ಸುರೇಶ್, ಪ್ರಾಂಶುಪಾಲೆ ಶ್ರುತಿ, ದೈಹಿಕ ಶಿಕ್ಷಕ ಮನು ಇದ್ದರು.
ವಿದ್ಯಾರ್ಥಿಗಳು ಹಲವು ದೇಶಭಕ್ತರ ವೇಷಭೂಷಣ ತೊಟ್ಟು ವೀರ ಗೀತೆಗಳಿಗೆ ಹಾಡಿ ನರ್ತಿಸಿದರು. ಕೆ.ಎಂ.ದೊಡ್ಡಿಯ ಮುಖ್ಯರಸ್ತೆಗಳಲ್ಲಿ ಶಾಲಾ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.