ವಿಜ್ಞಾನವನ್ನು ವಿನಾಶಕ್ಕೆ ಬಳಸುವುದಲ್ಲ

vijnaan chaitanya
Published on

ಹುಬ್ಬಳ್ಳಿ: ಜಗತ್ತಿನಲ್ಲಿ ವಿಜ್ಞಾನದಿಂದ ಸಾಕಷ್ಟು ಪ್ರಗತಿಯಾಗಿದ್ದರೂ, ಕೆಲವರು ವಿನಾಶಕ್ಕೆ ಬಳಕೆ ಮಾಡುತ್ತಿದ್ದಾರೆ. ವಿಜ್ಞಾನವನ್ನು ವಿನಾಶಕ್ಕೆ ಬಳಸುವುದಲ್ಲ. ಹೊಸದನ್ನು ಸೃಷ್ಟಿಸಲು ಬಳಕೆಯಾಗಬೇಕು ಎಂದು ವಿಜ್ಞಾನಿ ಪ್ರೊ. ಎಂ.ಎಸ್. ಶಿವಪ್ರಸಾದ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಧಾರವಾಡ, ರೋಟರಿ ಕ್ಲಬ್ ಆಫ್ ನಾರ್ಥ್, ರೋಟರಿ ಕ್ಲಬ್ ಆಫ್ ಮಿಡ್​ಟೌನ್ ಹಾಗೂ ನಾರಾಯಣ ಕೋಚಿಂಗ್ ಸೆಂಟರ್​ಗಳ ಸಹಯೋಗದಲ್ಲಿ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಧಾರವಾಡ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ರಾಜ್ಯ ಹಾಗೂ ಸಿಬಿಎಸ್​ಇ ಪಠ್ಯಕ್ರಮ ಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಆಯೋಜಿಸಿದ್ದ ವಿಜ್ಞಾನ ಚೈತನ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿಶ್ವದ ಉಗಮದಿಂದ ಹಿಡಿದು ಇಲ್ಲಿಯವರೆಗೂ ಮೂಲ ವಿಜ್ಞಾನದಲ್ಲಿ ಪ್ರಕೃತಿಯನ್ನು ಅರಿಯುವ ಪ್ರಯತ್ನಗಳು ನವೀನ ಸಂಶೋಧನೆಗೆ ಕಾರಣೀಭೂತವಾಗಿವೆ. ನಕ್ಷತ್ರ, ಗ್ರಹ, ಉಪಗ್ರಹ, ಗಾಳಿ, ಬೆಳಕು, ಶಬ್ದ, ನೀರು, ಅಗ್ನಿ ಹೀಗೆ ಪ್ರತಿಯೊಂದರಲ್ಲೂ ವಿಜ್ಞಾನ ಅಡಗಿದೆ. ಇಂದು ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಗಳು ಸೇರಿಕೊಂಡು ಮಾನವನ ಆಯುಷ್ಯವನ್ನು ವೃದ್ಧಿಸುತ್ತಿವೆ ಎಂದರು.

ರೋಟರಿ ಕ್ಲಬ್ ಆಫ್ ನಾರ್ಥ್ ಅಧ್ಯಕ್ಷ ಡಾ. ನಾಗರಾಜ ಶೆಟ್ಟಿ ಮಾತನಾಡಿ, ಶಿಕ್ಷಣದಿಂದ ಸ್ವಯಂ ಸುಧಾರಣೆಯ ಜತೆಗೆ ಸಮಾಜದಲ್ಲಿಯ ಬೇಕು ಬೇಡಗಳನ್ನು ಗುರುತಿಸಿ, ಸಮಾಜೋಪಯೋಗಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾತನಾಡಿ, ಸಮಾಜದಿಂದ ಗೌರವಿಸಲ್ಪಡುವ ವ್ಯಕ್ತಿ ಶಿಕ್ಷಕರಾಗಿದ್ದು, ಅವರು ಶಿಸ್ತು ಬದ್ಧತೆ, ಸಮಯಪ್ರಜ್ಞೆ ಮತ್ತು ದೂರದೃಷ್ಟಿ ಹೊಂದಿರಬೇಕು ಎಂದು ಹೇಳಿದರು. ನಾರಾಯಣ ಕೋಚಿಂಗ್ ಸೆಂಟರ್​ನ ವ್ಯವಸ್ಥಾಪಕ ರಾಘವೇಂದ್ರ ಸತ್ತಿಗೇರಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಪ್ರೊ. ಎನ್.ಎಚ್. ಅಯಾಚಿತ್, ಪ್ರೊ. ಎಸ್. ವಿ. ದೇಸಾಯಿ, ಪ್ರೊ. ಮಹೇಶ ಮಾಶಾಳ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಬಿಇಒ ಗಳಾದ ಉಮೇಶ ಬೊಮ್ಮಕ್ಕನವರ, ಚನ್ನಪ್ಪ ಗೌಡ, ರೋಟರಿ ಕ್ಲಬ್ ಆಫ್ ಮಿಡ್​ಟೌನ್ ಅಧ್ಯಕ್ಷ ರಾಜು ದೊಡ್ಡಮನಿ, ರವಿಕುಮಾರ ಬಾರಟಕ್ಕೆ, ರೇಖಾ ಭಜಂತ್ರಿ, ಎಸ್.ಎಂ. ಶಿವಳ್ಳಿಮಠ, ಸಂತೋಷ ದಂಡಗಲ್ಲ, ಮತ್ಯುಂಜಯ ಜಡಿಮಠ, ಆರ್.ಬಿ.ಪಾಟೀಲ, ಇತರರು ಇದ್ದರು. 360 ಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡಿದ್ದರು. ಶ್ರೀಧರ ಪಾಟೀಲ ಕುಲಕರ್ಣಿ ಸ್ವಾಗತಿಸಿದರು. ವಿಜ್ಞಾನ ವಿಷಯ ಪರಿವೀಕ್ಷಕ ಸಂಜಯ ಮಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net