ತೃತೀಯಲಿಂಗಿಗಳನ್ನು ಮನೆಯಿಂದ ಹೊರ ಹಾಕಬೇಡಿ : ಪದ್ಮಶ್ರೀ ಡಾ.ಬಿ. ಮಂಜಮ್ಮ ಜೋಗತಿ ಮನವಿ

Jogati_Manjamma
Published on

ಮೈಸೂರು: ಯಾವುದೇ ಮನೆಯಲ್ಲಿ ತೃತೀಯಲಿಂಗಿ ಮಗು ಜನಿಸಿದರೆ, ಆ ಮಗುವನ್ನು ಮನೆಯಿಂದ ಹೊರಹಾಕಬೇಡಿ. ಆ ಮಗುವಿಗೆ ನೀವು ಮನೆ, ಆಸ್ತಿ ಕೊಡಬೇಡಿ, ನಮ್ಮ ಮಗುವೆಂದು ಒಪ್ಪಿಕೊಂಡು ವಿದ್ಯೆಯೊಂದನ್ನು ಮಾತ್ರ ನೀಡಿದರೆ ಸಾಕು ಎಂದು ಪದ್ಮಶ್ರೀ ಪುರಸ್ಕೃತ ಜನಪದ ಕಲಾವಿದೆ ಡಾ.ಬಿ. ಮಂಜಮ್ಮ ಜೋಗತಿ ಎಂದು ಮನವಿ ಮಾಡಿದರು.

ಜಯಲಕ್ಷ್ಮೀಪುರಂನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ಗುರುವಾರ ಕಾಲೇಜಿನ ಡಾ.ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಸತ್ ಮತ್ತು ಪ್ರತಿಭಾ ವೇದಿಕೆ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿ ಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಮಗ ಕೊಲೆ ಮಾಡಿ ಜೈಲು ಶಿಕ್ಷೆ ಅನುಭವಿಸಿ ಬಂದರೂ ಆತನನ್ನು ಪಾಲಕರು ತಮ್ಮ ಮಗ ಎಂದು ಒಪ್ಪಿ ಸ್ವೀಕಾರ ಮಾಡುತ್ತಾರೆ. ಆದರೆ , ಯಾವುದೇ ತಪ್ಪು ಮಾಡದ ತೃತೀಯಲಿಂಗಿಗಳನ್ನು ಪಾಲಕರು ನಮ್ಮ ಮಗು ಎಂದು ಒಪ್ಪಿಕೊಳ್ಳುತ್ತಿಲ್ಲ. ಈ ರೀತಿ ಮನೆಯಿಂದ ಹೊರ ಬೀಳುವ ತೃತೀಯಲಿಂಗಿಗಳು ಸಮಾಜದಲ್ಲಿ ಭಿಕ್ಷೆ ಬೇಡಿ ಬದುಕುವ ಪರಿಸ್ಥಿತಿ ಇದ್ದು, ಅಂತಹ ಒಂದು ಪರಿಸ್ಥಿತಿ ನಿರ್ಮಾಣಕ್ಕೆ ಯಾವುದೇ ಪಾಲಕರು ಅವಕಾಶ ಮಾಡಿಕೊಡಬಾರದು. ಅವರಿಗೆ ನೀವು ಯಾವುದೇ ಆಸ್ತಿ ಕೊಡದೆ ಇದ್ದರೂ ಚಿಂತೆ ಇಲ್ಲ, ವಿದ್ಯೆಯೊಂದನ್ನು ನೀಡಿ. ತೃತೀಯ ಲಿಂಗಿಗಳಿಗೆ ಸರ್ಕಾರ ಉದ್ಯೋಗದಲ್ಲಿ ಶೇ.1 ರಷ್ಟು ಮೀಸಲಾತಿ ನೀಡಿದ್ದು, ಶಿಕ್ಷಣ ದೊರೆತರೆ ಅವರು ಸುಲಭವಾಗಿ ಉದ್ಯೋಗ ಪಡೆದು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಶಿಕ್ಷಣ, ಮೀಸಲಾತಿ ಸೌಲಭ್ಯ ಪಡೆದು ತೃತೀಯಲಿಂಗಿಗಳು ಶಿಕ್ಷಕಿಯರು, ಪೊಲೀಸರು ಸೇರಿದಂತೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು.

ಗಂಡು ಮಗು ಹುಟ್ಟಿ ಕೆಲವೊಮ್ಮೆ ಆ ಮಗು ಹೆಣ್ಣಾಗಿ ಪರಿವರ್ತನೆ ಹೊಂದುತ್ತದೆ. ಅದೇ ರೀತಿ ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆ ಹೊಂದುತ್ತದೆ. ಈ ರೀತಿ ಪರಿವರ್ತನೆ ಹೊಂದಿದರೂ ಆ ಮಗುವನ್ನು ಸಾಕುವ, ಉತ್ತಮ ಶಿಕ್ಷಣ ನೀಡುವ ಸಂಕಲ್ಪವನ್ನು ಪ್ರತಿಯೊಬ್ಬರು ತೊಡಬೇಕು. ಶಾಲಾ, ಕಾಲೇಜಿನಲ್ಲಿ ತೃತೀಯಲಿಂಗಿ ವಿದ್ಯಾರ್ಥಿಗಳು ಇದ್ದರೆ ಸಹಪಾಠಿಗಳು ಅವರನ್ನು ಗೇಲಿ ಮಾಡದೆ ಸಮಾನವಾಗಿ ಕಾಣಬೇಕು ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net