

ಆಲ್ದೂರು: ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ. ಸರ್ಕಾರಿ ಶಾಲೆಯೆಂಬ ತಾತ್ಸಾರ ಬೇಡ. ಛಲವಿದ್ದರೆ ಎಲ್ಲಿ ಬೇಕಾದರೂ ಸಾಧನೆ ಮಾಡಬಹುದು ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕೊಠಡಿ, ಗ್ರಂಥಾಲಯ, ಶಾಲಾ ಕೈತೋಟ, ಕುಡಿಯುವ ನೀರಿನ ಬೋರ್‌ವೆಲ್, ನೀರಿನ ಫಿಲ್ಟರ್‌ನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ನಾನು ಸರ್ಕಾರಿ ಶಾಲೆಯಲ್ಲಿ ಓದಿದವಳು. ಅಂದಿನ ದಿನಗಳಿಗೆ ಹೋಲಿಸಿದರೆ ಸದ್ಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳು ದೊರೆಯುತ್ತಿವೆ. ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಸ್ಮಾರ್ಟ್ ಕ್ಲಾಸ್ ಅವಶ್ಯಕತೆ ಇದೆ ಎಂದರು.
ದಾನಿಗಳ ನೆರವಿನಿಂದ ಸ್ಮಾರ್ಟ್ ಕ್ಲಾಸ್ ಕೊಠಡಿ, ಗ್ರಂಥಾಲಯ, ಶಾಲಾ ಕೈ ತೋಟ, ಬೋರ್‌ವೆಲ್, ನೀರಿನ ಫಿಲ್ಟರ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಆಲ್ದೂರು ಗ್ರಾಪಂ ಅಧ್ಯಕ್ಷೆ ಜಯಶೀಲಾ ಚಿದಂಬರ್ ಮಾತನಾಡಿ, ಸ್ಮಾರ್ಟ್ ಕ್ಲಾಸ್‌ಗಳಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸಾಧನೆ ಮಾಡಬೇಕು. ಗ್ರಾಪಂನಿಂದ ಶಾಲೆಗೆ ಅಗತ್ಯ ಸಹಕಾರ ನೀಡುತ್ತೇನೆ ಎಂದರು.
ಶಾಲಾ ಆಭಿವೃದ್ಧಿಗೆ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 3 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿ ನೀಡಿ ಪುರಸ್ಕರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಇಬ್ರಾಹಿಂ, ಸದಸ್ಯೆ ಆಶಾ ಸಂತೋಷ್, ಗ್ರಾಪಂ ಉಪಾಧ್ಯಕ್ಷ ಅಶೋಕ್, ಸದಸ್ಯರಾದ ಲಕ್ಷ್ಮಣ್, ಪವಿತ್ರಾ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮೊಹಮದ್ ಮುದಾಬೀರ್, ಹೋಬಳಿ ಅಧ್ಯಕ್ಷ ಪೂರ್ಣೇಶ್, ಕಾರ್ಯದರ್ಶಿ ಸುರೇಶ್, ಮುಖ್ಯಶಿಕ್ಷಕ ಸುರೇಶ್, ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಪೂರ್ಣೇಶ್, ಕಸಾಪ ಮಾಜಿ ಅಧ್ಯಕ್ಷ ರವಿಕುಮಾರ್, ಶಿಕ್ಷಕರಾದ ಹನುಮಂತಪ್ಪ, ಜ್ಯೋತಿ ಇದ್ದರು.