

ಹುಬ್ಬಳ್ಳಿ : ಮಹದಾಯಿ ನದಿ ನೀರು ಹಂಚಿಕೆಯ ವಿಚಾರವಾಗಿ ಗೋವಾ ಮುಖ್ಯಮಂತ್ರಿ ನೀಡಿರುವ ರಾಜಕೀಯ ಪ್ರೇರಿತ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ದಾಖಲೆಗಳು ನಮ್ಮ ಪರವಾಗಿವೆ. ಹೀಗಾಗಿ, ಕರ್ನಾಟಕಕ್ಕೆ ಜಯ ಸಿಗುವುದು ಖಚಿತ. ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅನಗತ್ಯ ರಾಜಕೀಯ ಮಾಡುವುದನ್ನು ಬಿಟ್ಟು, ಯೋಜನೆಗೆ ಪೂರಕವಾಗಿರುವ ಅಗತ್ಯ ದಾಖಲೆಗಳನ್ನು ಕೇಂದ್ರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆಯೂ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ಗೋವಾದಲ್ಲಿ ನಿಂತು, ಕರ್ನಾಟಕಕ್ಕೆ ಹನಿ ನೀರನ್ನೂ ಕೊಡುವುದಿಲ್ಲವೆಂದು ಅಬ್ಬರಿಸಿದ್ದರು. ಅದೇ ರೀತಿ, ಗೋವಾ ಮುಖ್ಯಮಂತ್ರಿ ಹೇಳಿಕೆಯನ್ನೂ ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದರು.
ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಮಧ್ಯದ ಮುಸುಕಿನ ಗುದ್ದಾಟ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಸೆಪ್ಟಂಬರ್ ಅಥವಾ ಅಕ್ಟೋಬರ್ನಲ್ಲಿ ರಾಜಕೀಯ ಕ್ರಾಂತಿ ಆಗಲಿದೆ. ಡಿ.ಕೆ. ಶಿವಕುಮಾರ, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ ಅಥವಾ ಸತೀಶ ಜಾರಕಿಹೊಳಿ ಅವರಲ್ಲಿ ಯಾರು ಮುಖ್ಯಮಂತ್ರಿ ಆಗುತ್ತಾರೋ ಕಾದು ನೋಡಬೇಕು ಎಂದರು.
ಧರ್ಮಸ್ಥಳಲ್ಲಿ ನಡೆದಿವೆ ಎನ್ನಲಾಗುತ್ತಿರುವ ಕೊಲೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಅದರಿಂದ ಸತ್ಯಾಸತ್ಯತೆ ಹೊರ ಬರಲಿದೆ. ಆದರೆ, ಪೂರ್ವಾಗ್ರಹ ಪೀಡಿತ ತನಿಖೆ ಆಗಬಾರದು ಎಂದು ಹೇಳಿದರು.