ಜಿಲ್ಲೆಯ ರೈತರನ್ನು ಒಕ್ಕಲೆಬ್ಬಿಸಬೇಡಿ: ಬಿ.ವೈ.ರಾಘವೇಂದ್ರ

mp raghavendra meeting
ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಧಿಕಾರಿಗಳ ಸಭೆ ನಡೆಸಿದರು. ಗುರುದತ್ತ ಹೆಗಡೆ, ಶಿವಶಂಕರ್, ಅಶೋಕಮೂರ್ತಿ ಇದ್ದರು.
Published on

ಶಿವಮೊಗ್ಗ: ಸರ್ಕಾರವೇ ರೈತರಿಗೆ ಸಾಗುವಳಿ ಪತ್ರ ಕೊಟ್ಟಿದ್ದು, ಇದೀಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿರುವ ಕಂದಾಯ ಇಲಾಖೆ ಕ್ರಮ ಸಮಂಜಸವಲ್ಲ. ಯಾವುದೇ ಕಾರಣಕ್ಕೂ ಜಿಲ್ಲೆಯ ಯಾವೊಬ್ಬ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಭದ್ರಾವತಿ ತಾಲೂಕಿನ ದಿಗ್ಗೇನಹಳ್ಳಿ, ಹನುಮಂತಾಪುರ ಭಾಗದ ರೈತರ ನಿಯೋಗದ ಜತೆಗೆ ಅಧಿಕಾರಿಗಳ ಸಭೆ ನಡೆಸಿದ ಅವರು, ರೈತರಿಗೆ ರಕ್ಷಣೆ ನೀಡುವ ಜವಾಬ್ದಾರಿ ಸರ್ಕಾರದ್ದು. ಮೂರು ಎಕರೆ ಒಳಗಿದ್ದರೆ ಒಕ್ಕಲೆಬ್ಬಿಸದಂತೆ ಸುಪ್ರೀಂಕೋರ್ಟ್ ಆದೇಶವಿದೆ. ಆದರೂ ಸಣ್ಣ ರೈತರಿಗೆ ನೋಟಿಸ್ ಕೊಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಕಂದಾಯ ಇಲಾಖೆಯಿಂದ ಸಾಗುವಳಿ ಚೀಟಿ ಕೊಟ್ಟಿದ್ದರೂ ರೈತರಿಗೆ ಅನಾವಶ್ಯಕವಾಗಿ ನೋಟಿಸ್ ನೀಡಿ ತೊಂದರೆ ಕೊಡಬಾರದು. ಮೈಸೂರು ರಾಜರ ಕಾಲದಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೂ ನೋಟಿಸ್ ನೀಡಲಾಗುತ್ತಿದೆ. ಇದು ಶಿವಮೊಗ್ಗ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಇಡೀ ರಾಜ್ಯ, ದೇಶಾದ್ಯಂತ ಸಮಸ್ಯೆ ಇದೆ. ಸರ್ಕಾರವನ್ನು ನ್ಯಾಯಾಲಯ ಪಾರ್ಟಿ ಮಾಡಿದ್ದರೂ ವಾಸ್ತವತೆಯನ್ನು ಮನವರಿಕೆ ಮಾಡಿಕೊಡಬೇಕು. ಸಾಗುವಳಿ ಚೀಟಿ ಕೊಟ್ಟಿದ್ದು, ಈ ಸಮಸ್ಯೆ ಪರಿಹರಿಸಲು ಸಾವಿರಾರು ದಾರಿಗಳಿವೆ. ಅದನ್ನು ಹುಡುಕಿ ರೈತರ ಪರವಾಗಿ ಸರ್ಕಾರವೇ ಪಾರ್ಟಿ ಆಗಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಡಿಸಿಎಫ್ ಶಿವಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಜಿಪಂ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರಿ, ಮುಖಂಡರಾದ ಮಂಗೋಟೆ ರುದ್ರೇಶ್, ಅಶೋಕಮೂರ್ತಿ, ಭದ್ರಾವತಿ ತಾಲೂಕಿನ ರೈತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net