ಅನುಮತಿ ಇಲ್ಲದೆ ನಮ್ಮ ಭೂಮಿ ಬಳಿ ಕಾಲಿಡಬೇಡಿ

Oplus_16908288
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಕೆಐಎಡಿಬಿ ಅಧಿಕಾರಿಗಳು ಮತ್ತು ರೈತರೊಂದಿಗೆ ಸಭೆ ಆಯೋಜಿಸಲಾಗಿತ್ತು. ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಉಪ ನೋಂದಣಾಧಿಕಾರಿ ವಿವೇಕ್ ಹಾಗೂ ರೈತರು ಇದ್ದರು.
Published on

ನಂಜನಗೂಡು: ಪೂರ್ವಜರ ಕಾಲದಿಂದಲೂ ಕೃಷಿ ಮಾಡಿ ಬದುಕು ಸಾಗಿಸುವ ನಮ್ಮ ಕೃಷಿ ಭೂಮಿಗೆ ದರ ನಿಗದಿ ಮಾಡಲು ನೀವ್ಯಾರು? ನಮ್ಮಗಳ ಅನುಮತಿ ಇಲ್ಲದೆ ನಮ್ಮ ಭೂಮಿಯ ಬಳಿ ಕಾಲಿಟ್ಟರೆ ನಿಮಗೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಕೆಐಡಿಬಿ ಅಧಿಕಾರಿಗಳಿಗೆ ರೈತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಗುರುವಾರ ಕೆಐಎಡಿಬಿ ಜಿಲ್ಲಾ ಮಟ್ಟದ ಅಧಿಕಾರಿ ದಯಾನಂದ್ ಭಂಡಾರಿ ನೇತೃತ್ವದಲ್ಲಿ ರೈತರು ಮತ್ತು ಅಧಿಕಾರಿಗಳ ಸಭೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸಿಂಧುವಳ್ಳಿಪುರ, ಎಲಚಗೆರೆ, ಮುದ್ದಹಳ್ಳಿ ಗ್ರಾಮಗಳ ಸುತ್ತಮುತ್ತ ಸುಮಾರು 450 ಎಕರೆ ಪ್ರದೇಶದಲ್ಲಿರುವ ರೈತರ ಕೃಷಿ ಭೂಮಿಯನ್ನು ಕೆಐಎಡಿಬಿ ಅಧಿಕಾರಿಗಳು ಭೂಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದರು. ಕಳೆದ ಐದಾರು ವರ್ಷಗಳಿಂದಲೂ ಕೆಐಎಡಿಬಿ ಎಲ್ಲ ರೀತಿಯ ಸಿದ್ಧತೆ ಕಾರ್ಯ ನಡೆಸಿದೆ. ಹಾಗಾಗಿ ರೈತರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ರೈತರ ಭೂಮಿಗೆ ದರ ನಿಗದಿ ಮಾಡಲು ಸಭೆ ಆಯೋಜಿಸಲಾಗಿತ್ತು.

ಅಧಿಕಾರಿಗಳು ರೈತರ ಒಂದು ಎಕರೆ ಕೃಷಿ ಭೂಮಿಗೆ 75 ಲಕ್ಷ ರೂ.ಗಳನ್ನು ನಿಗದಿ ಮಾಡಲು ಮುಂದಾದರು. ಇದರಿಂದ ಆಕ್ರೋಶ ವ್ಯಕ್ತಪಡಿಸಿದ ರೈತರು ನಮ್ಮ ಭೂಮಿಯನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ನಮ್ಮ ಅನುಮತಿ ಇಲ್ಲದೆ ನಮ್ಮ ಭೂಮಿಯ ಬಳಿ ಕಾಲಿಡಬೇಡಿ ಎಂದು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಸಭೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸಭೆಯಲ್ಲಿ ಹಾಜರಿದ್ದ ಶೇ. 80ರಷ್ಟು ರೈತರು ಅಧಿಕಾರಿಗಳ ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದರು.

ಈಗಾಗಲೇ ಕೆಐಎಡಿಬಿ ಅಧಿಕಾರಿಗಳು ರೈತರ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡು ಎಷ್ಟು ರೈತರ ಮಕ್ಕಳಿಗೆ ಉದ್ಯೋಗ ನೀಡಿದ್ದೀರಿ ಎಂದು ಸಾಕಷ್ಟು ಪ್ರಶ್ನೆಗಳನ್ನು ಸುರಿಮಳೆಗೈದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರೈತರ ಆಕ್ರೋಶವನ್ನು ನೋಡಿದ ಕೆಐಡಿಬಿ ಅಧಿಕಾರಿಗಳು ಬಂದ ದಾರಿಗೆ ಸುಂಕ ಇಲ್ಲ ಎಂದಂತೆ ಸಭೆ ಸ್ಥಗಿತಗೊಳಿಸಿ ಹೊರಟರು. ಸಭೆಯಲ್ಲಿ ನಂಜನಗೂಡಿನ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಉಪನೋಂದಣಾಧಿಕಾರಿ ವಿವೇಕ್, ಸಿಂಧುವಳ್ಳಿಪುರ ಏಲಚಗೆರೆ, ಮುದ್ದಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net