

ಹುಬ್ಬಳ್ಳಿ: ಪತಿ-ಪತ್ನಿಯರಿಬ್ಬರೂ ಆರ್ಥಿಕ ಸ್ವಾವಲಂಬಿಗಳಾಗಿದ್ದಾರೆ. ಇದರಿಂದ ಭಿನ್ನಾಭಿಪ್ರಾಯದಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿದೆ. ಆರ್ಥಿಕ ಸ್ವಾವಲಂಬನೆ ನೆಪದಿಂದ ಸಂತೋಷದ ಬದುಕು ಹಾಳು ಮಾಡಿಕೊಳ್ಳದಿರಿ ಎಂದು 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಅರಿ ತಿಳಿವಳಿಕೆ ನೀಡಿದರು.
ಇಲ್ಲಿಯ ನೂತನ ನ್ಯಾಯಾಲಯ ಸಂಕೀರ್ಣದ ಕೌಟುಂಬಿಕ ನ್ಯಾಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರ್ಥಿಕ ಸ್ವಾವಲಂಬನೆಯಿಂದ ಪ್ರತಿಯೊಬ್ಬರಲ್ಲಿಯೂ ಅಹಂಕಾರ, ಸ್ವ ಪ್ರತಿಷ್ಠೆ ಹೆಚ್ಚಾಗಿ ಭಿನ್ನಾಭಿಪ್ರಾಯ ಮೂಡುತ್ತಿದೆ. ಕುಟುಂಬಸ್ಥರು ಹಾಗೂ ಆಪ್ತರಿಂದ ಸೂಕ್ತ ಮಾರ್ಗದರ್ಶನ, ಸಲಹೆಗಳೂ ಸಿಗುತ್ತಿಲ್ಲ. ಹೀಗಾಗಿ ವಿಚ್ಛೇದನಕ್ಕೆ ನ್ಯಾಯಾಲಯ ಮೆಟ್ಟಿಲೇರುತ್ತಿದ್ದಾರೆ. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದರು.
ಪ್ರೇಮಾಂಕುರಕ್ಕೆ ಸಿಲುಕಿ ವಿವಾಹವಾಗಿರುವ ಶೇ. 90ರಷ್ಟು ದಂಪತಿ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಹೆಚ್ಚು ಆದ್ಯತೆ ನೀಡಿ ಉಜ್ವಲ ಭವಿಷ್ಯ ಕಂಡುಕೊಳ್ಳಬೇಕು ಎಂದರು.
ಹಿರಿಯ ವಕೀಲ ಎಸ್.ವಿ. ಕೊಪ್ಪರ, ಇರುವುದೊಂದೆ ಜೀವನವನ್ನು ನೆಮ್ಮದಿಯಿಂದ ಕಳೆಯಬೇಕು. ಪೀಳಿಗೆ ಬದಲಾದಂತೆ ಮನಸ್ಥಿತಿಯೂ ಬದಲಾಗುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಿದರೆ ಸುಖಿ ಸಂಸಾರ ನಡೆಸಲಿದ್ದಾರೆ ಎಂದರು.
ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಬಾಣದ ಮಾತನಾಡಿದರು. ವಕೀಲರು ಮತ್ತು ಸಂಧಾನಕಾರ ಸಿ.ಎಸ್. ಸಜ್ಜನಶೆಟ್ಟರ, ವಕೀಲರಾದ ಮಹೇಶ ಹಿರೇಮಠ, ಕೆ. ಶೋಭಾ, ಎಸ್.ಐ. ಕೋರಿ ಇತರರು ಇದ್ದರು.
ಸಿಹಿ ತಿನಿಸಿದ ದಂಪತಿಗಳು: ಕೌಟುಂಬಿಕ ನ್ಯಾಯಾಲಯವು ಶನಿವಾರ ನಡೆಸಿದ ಲೋಕ ಅದಾಲತ್‌ನಲ್ಲಿ ಪ್ರಧಾನ ಕೌಟುಂಬಿಕ ನ್ಯಾಯಾಲಯದಲ್ಲಿದ್ದ 11 ಜೋಡಿ ಮತ್ತು 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿದ್ದ 10 ಜೋಡಿ ಮರು ದಾಂಪತ್ಯಕ್ಕೆ ಕಾಲಿಟ್ಟರು. ಈ ವೇಳೆ ದಂಪತಿಗಳು ನ್ಯಾಯಾಧೀಶರು ಮತ್ತು ನ್ಯಾಯವಾದಿಗಳಿಗೆ ಸಿಹಿ ತಿನಿಸಿ ಸತ್ಕರಿಸಿದರು.